ಇತ್ತೀಚಿನ ಸುದ್ದಿ

ತಂಬಾಕು ಸೇವನೆ ತಡೆಯಲು ಸಾಮುದಾಯಿಕ ಜಾಗೃತಿ, ಕೋಟ್ಪಾ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ ಮುಖ್ಯ : ಡಿ.ಎಚ್.ಓ ಡಾ.ಎಸ್. ಚಿದಂಬರ

ಚಾಮರಾಜನಗರ : ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಮುದಾಯಿಕ ಜಾಗೃತಿ ಹಾಗೂ ಕೋಟ್ಪಾ ಕಾನೂನು ನಿಯಮಗಳ ಪರಿಣಾಮಕಾರಿ ಅನುಷ್ಠಾನ ಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ ಅವರು ತಿಳಿಸಿದರು.


ನಗರದ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಂಬಾಕು ದುಷ್ಪರಿಣಾಮಗಳು ಮತ್ತು ಸ್ಥಳೀಯ ಮಟ್ಟದಲ್ಲಿ ಕೋಟ್ಟಾ-2003ರ ಕಾನೂನು ನಿಯಮಗಳ ಅನುಷ್ಠಾನ ಕುರಿತು ಜಿಲ್ಲಾ ಆರೋಗ್ಯ ಮೇಲ್ವಿಚಾರಕರು, ಶಿಕ್ಷಣಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಂಬಾಕು ಉತ್ಪನ್ನಗಳ ಸೇವನೆಯು ಪ್ರಾರಂಭದಲ್ಲಿ ಅಭ್ಯಾಸವಾಗಿ ನಂತರ ಹವ್ಯಾಸವಾಗಿ ಕೊನೆಗೆ ತಂಬಾಕು ವ್ಯಸನಿಯಾಗುವಂತೆ ಮಾಡುತ್ತದೆ.

ತಂಬಾಕು ತಯಾರಿಕಾ ಕಂಪನಿಗಳು ತಂಬಾಕು ಪದಾರ್ಥಗಳನ್ನು ಅನೇಕ ರೀತಿಯಲ್ಲಿ ಆಕರ್ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುತ್ತಿವೆ. ಅಪ್ರಾಪ್ತ ವಯಸ್ಕರರು ಮತ್ತು ಯುವಕರು ದಿನನಿತ್ಯದ ಒತ್ತಡ, ಸ್ನೇಹಿತರ ಒತ್ತಾಯ, ಕುತೂಹಲ, ಆಕರ್ಷಣೆ, ಖಿನ್ನತೆ, ಕುಟುಂಬದಲ್ಲಿ ನಡೆಯುವ ಅಹಿತಕರ ಘಟನೆಗಳು ಹಾಗೂ ಪ್ರೇಮ ವೈಪಲ್ಯ ಇತರೆ ಕಾರಣಗಳಿಂದ ತಂಬಾಕಿಗೆ ವ್ಯಸನಿಗಳಾಗಿ ಮಾರ್ಪಾಡಾಗುತ್ತಾರೆ.

ತಂಬಾಕು ಸೇವನೆಯಿಂದ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಮತ್ತು ರಕ್ತನಾಳಗಳ ಸಂಬಂಧಿತ ಖಾಯಿಲೆಗಳು, ಪಾಶ್ರ್ವವಾಯು ಹಾಗೂ ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರ ಜೊತೆಗೆ ಪುರುಷರಲ್ಲಿ ನಪುಂಸಕತೆ, ಹೆಂಗಸರಲ್ಲಿ ಬಂಜೆತನ, ದಿನ ತುಂಬದೆ ಹೆರಿಗೆ ಆಗುವುದು, ಕಡಿಮೆ ತೂಕದ ಮಗುವಿನ ಜನನ ಹಾಗೂ ಇತರೆ ಸಮಸ್ಯೆಗಳು ಕಂಡುಬರುತಿದ್ದು ಇದರಿಂದಾಗಿ ಪ್ರತಿ ವರ್ಷ 13 ಲಕ್ಷಕ್ಕೂ ಹೆಚ್ಚು ಜನರು ಸಾವಿಗೆ ಒಳಗಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಈ ಸಾವು ನೋವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೇ ಕೋಟ್ಪಾ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ತಂಬಾಕನ್ನು ಸ್ವಯಂ ಪ್ರೇರಣೆಯಿಂದ ತ್ಯಜಿಸಬೇಕು. ಇದರಿಂದ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಈ ನಿಟ್ಟಿನಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಯೋಧರಂತೆ ಕರ್ತವ್ಯ ನಿರ್ವಹಿಸಬೇಕು ಮತ್ತು ಸಮಾಜದಲ್ಲಿ ಬದಲಾವಣೆ ತರಲು ಬದ್ಧರಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಂದರೇಶ್, ಡಾ. ದರ್ಶನ್, ಡಾ. ವಿನಯ್, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ರವಿಕುಮಾರ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಪ್ರಶಾಂತ್ ಸೇರಿದಂತೆ ಇತರರಿದ್ದರು.

ವರದಿ : ಇರಸವಾಡಿ ಸಿದ್ದಪ್ಪಾಜಿ, tv8newskannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button