2022ರಲ್ಲಿ ಸಾರ್ವತ್ರಿಕ ಲಸಿಕೆ ವಿತರಣೆ ಬಗ್ಗೆ ಉನ್ನತ ಮಟ್ಟದ ಕಾರ್ಯಕ್ರಮ
ವಾಶಿಂಗ್ಟನ್, ಸೆಪ್ಟೆಂಬರ್ 23: ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯ ಅಧ್ಯಕ್ಷ ಅಬ್ದುಲ್ಲಾ ಶಾಹೀದ್ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತಿಳಿಸಿದ್ದಾರೆ.
ಯುಎಸ್ ಅಧ್ಯಕ್ಷ .ಜೋ ಬೈಡೆನ್ ಆಯೋಜಿಸಿದ ಜಾಗತಿಕ ಕೊವಿಡ್-19 ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧ್ಯಕ್ಷ ಅಬ್ದುಲ್ಲಾ ಶಾಹೀದ್ ಮಾತನಾಡಿದ್ದಾರೆ. “ಸಾರ್ವತ್ರಿಕ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ನಾನು ಉನ್ನತ ಮಟ್ಟದ ಕಾರ್ಯಕ್ರಮವೊಂದನ್ನು ಆಯೋಜಿಸಲಿದ್ದೇನೆ,” ಎಂದು ಹೇಳಿದ್ದಾರೆ.
ಜಾಗತಿಕ ಸಮ್ಮೇಳನದ ಚುಕುಟು ಭಾಷಣದಲ್ಲಿ ಶಾಹೀದ್ ಯಾವಾಗ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮವನ್ನು ಆಯೋಜಸಲಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. 2022ರಲ್ಲಿ ಈ ಕಾರ್ಯಕ್ರಮ ನಡೆಯುವ ಬಗ್ಗೆ ಅವರ ವಕ್ತಾರೆ ಮೋನಿಕಾ ಗ್ರೇಲಿ ತಿಳಿಸಿದ್ದಾರೆ.
ಕೊರೊನಾವೈರಸ್ ಲಸಿಕೆಯ ಪೂರೈಕೆ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ಬಹುಪಕ್ಷೀಯ ಕಾರ್ಯವಿಧಾನದ ಮೂಲಕ ಕೊವ್ಯಾಕ್ಸ್ ಅನ್ನು ಬೆಂಬಲಿಸಬೇಕಿದೆ. ಆ ಮೂಲಕ ಪರಸ್ಪರ ರಾಷ್ಟ್ರಗಳು ರಾಜಕೀಯ ಬೆಂಬಲವನ್ನು ನೀಡಬೇಕಾಗಿದೆ,” ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಅಬ್ದುಲ್ಲಾ ಶಾಹೀದ್ ಹೇಳಿದ್ದಾರೆ. ಸಾರ್ವತ್ರಿಕ ಲಸಿಕೆ ವಿತರಣೆ ನಡುವಿನ ವ್ಯತ್ಯಾಸವನ್ನು ಗುರುತಿಸಲಾಗುತ್ತಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಾವು ಆಯೋಜಿಸಿರುವ ಕಾರ್ಯಕ್ರಮ ಕೇವಲ ಪೂರೈಕೆ ಹಾಗೂ ವಿತರಣೆ ಸವಾಲುಗಳ ಕುರಿತು ಚರ್ಚೆಯಷ್ಟೇ ಆಗಿರುವುದಿಲ್ಲ. ವಾಸ್ತವದಲ್ಲಿ ಯಾರೊಬ್ಬರೂ ಹಿಂದೆ ಉಳಿಯದಂತೆ ನೋಡಿಕೊಂಡು ಒಟ್ಟಾಗಿ ಸಾಗುವ ನಿಟ್ಟಿನಲ್ಲಿ ಕೆಲಸ ಮಾಡುವ ನಂಬಿಕೆ ಮತ್ತು ವಿಶ್ವಾಸವಿದೆ. ಎಲ್ಲರೂ ಒಗ್ಗಟ್ಟಾಗಿ ಲಸಿಕೆ ವಿತರಣೆ ಮತ್ತು ಪೂರೈಕೆಯಲ್ಲಿ ಕೈ ಜೋಡಿಸಿದರೆ ಸಾರ್ವತ್ರಿಕ ಲಸಿಕೆ ವಿತರಣೆ ಮೂಲಕ ಜಾಗತಿಕ ಗುರಿಯನ್ನು ತಲುಪುವುದಕ್ಕೆ ಸಾಧ್ಯವಾಗುತ್ತದೆ. ಕೊರೊನಾವೈರಸ್ ವಿರುದ್ಧ ಹೋರಾಡುವುದಕ್ಕೆ ಈ ಲಸಿಕೆಗಳೇ ಶ್ರೇಷ್ಠ ಸುರಕ್ಷತೆಯಾಗಿದೆ. ಜಗತ್ತಿನ ಸರ್ವಶ್ರೇಷ್ಠ ಅವಕಾಶ ತೆರೆದುಕೊಳ್ಳಲಿವೆ. ಕೊವಿಡ್-19 ರೂಪಾಂತರಗಳ ವಿರುದ್ಧದ ಹೋರಾಟವೇ ನಮ್ಮ ಸಂಪತ್ತು ಆಗಿರಲಿದೆ,” ಎಂದು ಅಬ್ದುಲ್ಲಾ ಶಾಹೀದ್ ತಿಳಿಸಿದ್ದಾರೆ.