ಇತ್ತೀಚಿನ ಸುದ್ದಿ

ವಿಜ್ಞಾನ ವಸ್ತು ಪ್ರದರ್ಶನ: ವಿದ್ಯಾರ್ಥಿಗಳ ಮೆರಗು

ನಂಜನಗೂಡು: ಸ್ಮಾರ್ಟ್‌ ಸಿಟಿಗೆ ಆಧುನಿಕ ತಂತ್ರಜ್ಞಾನ ಬಳಕೆ ರಚನೆ ತೋರಿಸುವ ಮಾದರಿ, ದೂರದ ವಸ್ತುಗಳನ್ನು ದೊಡ್ಡದಾಗಿ ತೋರಿಸುವ ದೂರದರ್ಶಕ, ಮಳೆನೀರು ಕೊಯ್ಲು ಮಾದರಿ, ನಾನಾ ಕೃಷಿ ಕುರಿತು ಮಾಹಿತಿ. ಇದು ನಂಜನಗೂಡು ನಗರದ ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಪ್ರದರ್ಶನ್ 2024 ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ.

ವಿಜ್ಞಾನ ಕ್ಷೇತ್ರದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನದಲ್ಲಿ ಕಾರ್ಮೆಲ್ ಕಾಂಪೋಸಿಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. 320ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ವಸ್ತು ಪ್ರದರ್ಶನ ನೋಡುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಜತೆಗೆ ಜ್ಞಾನ ಹೆಚ್ಚಿಸುವಲ್ಲೂ ಯಶಸ್ವಿಯಾಯಿತು. ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ. ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಕಾಗಾದು. ಜತೆಗೆ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷಣದ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶ್ಯಕವಾಗುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಮಕ್ಕಳ ಪ್ರತಿಭೆ ಅನಾವರಣಕ್ಕೊಂದು ಉತ್ತಮ ವೇದಿಕೆಯಾಗಿತ್ತು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪರಮಾಣುಗಳ ರಚನೆ, ವಿದ್ಯುತ್ ಕಾಂತೀಯ ಕ್ರೇನ್‌, ಪರಿಸರ ಮಾಲಿನ್ಯ ನಿಯಂತ್ರಣ, ರಕ್ತ ಶುದ್ಧೀಕರಣ, ಸ್ವಯಂ ಚಾಲಿತ ಗಡಿ ಕಾಯುವ ಯಂತ್ರ, ನೀರಿನ ಮಟ್ಟ ಸೂಚಕ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ ಸೇರಿದಂತೆ ನಾನಾ ಬಗೆಯ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು. ಸ್ಮಾರ್ಟ್‌ಸಿಟಿಯಲ್ಲಿ ಆಧುನಿಕವಾಗಿ ತಾಂತ್ರಿಕ ಶಿಕ್ಷ ಣ, ಮಹಾವಿದ್ಯಾಲಯಗಳು, ಪದವಿ, ಸ್ನಾತಕೋತ್ತರ ಕೇಂದ್ರಗಳು, ಯುಜಿಡಿ, ನಗರ ಸಾರಿಗೆ ಸೌಲಭ್ಯ, ನಗರ ಆನ್‌ಲೈನ್‌ ಆಡಳಿತ, ನವೀಕೃತ ಮಾರುಕಟ್ಟೆ ಬ್ಯಾಂಕಿಂಗ್‌ ವ್ಯವಸ್ಥೆ, ಕೈಗಾರಿಕೆ, ಹೊರರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹೀಗೆ ಒಂದಿಷ್ಟು ಆಲೋಚನೆ, ಯೋಜನೆಗಳು, ಸಲಹೆ, ಸೂಚನೆ, ಸಹಕಾರ ನೀಡುವಂತಹ ಮಕ್ಕಳ ಸ್ಮಾರ್ಟ್‌ ಸಿಟಿ ಕಲ್ಪನೆ ಅವರು ತಯಾರಿಸಿದ ಮಾದರಿಗೆ ಜೀವ ತುಂಬುವಂತಿತ್ತು. ತ್ಯಾಜ್ಯ ನಿರ್ವಹಣೆ ನೀರಿನ ಸಂರಕ್ಷಣೆ ಕುರಿತು ತಮ್ಮ ಕೈಚಳಕದಿಂದಲೇ ಮಾಡಿದ ವಸ್ತು ಪ್ರದರ್ಶನ ನೆರೆದವರ ಮನಸೂರೆಗೊಳಿಸಿತು. ಕಾರ್ಖಾನೆ, ಹೋಟೆಲ್‌ನಿಂದ ಹೊರಬೀಳುವ ತ್ಯಾಜ್ಯ, ಹಸಿರು ಬೇಸಾಯದಿಂದ ಜನ ಸಾಮಾನ್ಯರಿಗೆ ದೊರಕುವ ಲಾಭ ಸೇರಿದಂತೆ ಮಾಹಿತಿ ನೀಡುವ ಮಾದರಿ ತಯಾರಿಸುವ ಮೂಲಕ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಟ್ಟರು. ಇಂಥ ವಸ್ತು ಪ್ರದರ್ಶನ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳು ಕೇವಲ ಪುಸ್ತಕದ ಹುಳುಗಳಾದರೆ ಪ್ರಯೋಜನವಿಲ್ಲ. ಜ್ಞಾನಕ್ಕೂ ವಿಸ್ತರಿಸಿದಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಬರುತ್ತದೆ ಎಂಬುದಕ್ಕೆ ಈ ವಸ್ತು ಪ್ರದರ್ಶನ ಸಾಕ್ಷಿಯಾಗಿತ್ತು. ವಸ್ತು ಪ್ರದರ್ಶನ ವೀಕ್ಷಿಸಿದ ಪ್ರತಿಯೊಬ್ಬರು ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂಜನಗೂಡು: ನಂಜನಗೂಡು ನಗರದ ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರದರ್ಶನ್ 2024 ರ ಕಾರ್ಯಕ್ರಮವನ್ನು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್. ದಿನೇಶ್ ಉದ್ಘಾಟಿಸಿದರು.
ಬಳಿಕ ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜಂಟಿ ಕಾರ್ಯದರ್ಶಿ ಎ.ಸಿ ಮರಿಯಾ ಕೀರ್ತನ್ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷ ನಮ್ಮ ಕಾಲೇಜಿನಲ್ಲಿ ಪ್ರದರ್ಶನ್ 2024 ಎಂಬ ವಿಜ್ಞಾನ ತಂತ್ರಜ್ಞಾನ ಮತ್ತು ವಾಣಿಜ್ಯ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ. ಪ್ರದರ್ಶನದಲ್ಲಿ ಸುಮಾರು 320ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ನೂರಕ್ಕೂ ಹೆಚ್ಚು ಮಾದರಿಯಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಹೆಚ್ಚಿಸಲು ಈ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಈ ಪ್ರದರ್ಶನದಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮರಿಯಾ ಗ್ರೇಸಿ, ಉಪ ಪ್ರಾಂಶುಪಾಲೆ ಮರಿಯಾ ಮಾರ್ಟೆಲ್, ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಎ.ಸಿ ಕ್ಯಾರೋಲಿನ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಸಿಎಂ ಸುಗಂಧರಾಜು tv8newskannada ಮೈಸೂರು

Related Articles

Leave a Reply

Your email address will not be published. Required fields are marked *

Back to top button