ದೇಶ

ಹೇಮಾವತಿ ನೀರು ತರುವಲ್ಲಿ ನನ್ನ ಶ್ರಮ: ಸಚಿವ ಎನ್. ಚಲುವರಾಯಸ್ವಾಮಿ

ನಾಗಮಂಗಲ :.ಕೃಷಿ ಇಲಾಖೆ ಮೂಲಕ ರೈತರಿಗೆ ಸಿಗಬಹುದಾದ ಎಲ್ಲ ಸವಲತ್ತುಗಳು ಒಂದೇ ಕಡೆ ಸಿಗಬೇಕೆಂಬ ಉದ್ದೇಶದಿಂದ ಪ್ರತಿ ಹೋಬಳಿ ಕೇಂದ್ರಗಳಲ್ಲಿ ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ದೇವಲಾಪುರದಲ್ಲಿ 2 ಕೋಟಿ ರೂ.ವೆಚ್ಚದ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ರೈತರ ಹಿತ ಕಾಪಾಡುವುದೇ ರಾಜ್ಯ ಸರ್ಕಾರದ ಮೊದಲ ಅದ್ಯತೆಯಾಗಿದ್ದು, ನಾನು ಕೃಷಿ ಸಚಿವನಾದ ನಂತರ ಜಿಲ್ಲೆಯಲ್ಲಿ 15 ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿಸಲಾಗಿದೆ ಎಂದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿದೆಲ್ಲಾ ಇಲಾಖೆಗಳಿಗಿಂತ ಕೃಷಿ ಇಲಾಖೆಯೇ ಬಹು ಮುಖ್ಯ. ಅದಕ್ಕಾಗಿ ಪ್ರತಿ ಹೋಬಳಿ ಕೇಂದ್ರಗಳಲ್ಲಿಯೂ ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಿಸಬೇಕೆಂಬುದು ನನ್ನ ಮುಖ್ಯ ಉದ್ದೇಶವಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಯಾವುದೇ ಬೆಳೆಗಳನ್ನು ಬೆಳೆಯುವ ಪದ್ಧತಿ, ಅಧಿಕ ಇಳುವರಿ ತೆಗೆಯುವ ವಿಧಾನ ಮತ್ತು ಮಣ್ಣಿತ ಫಲವತ್ತತೆ ಸೇರಿದಂತೆ ಹಲವು ವಿಚಾರಗಳನ್ನು ರೈತರಿಗೆ ಮಾಹಿತಿ ನೀಡಲಾಗುವುದು. ಕೃಷಿ ಚಟುವಟಿಕೆ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿಕೊಟ್ಟು ಅಧಿಕಾರಿಗಳಿಂದ ಪಡೆದುಕೊಳ್ಳಬಹುದು ಎಂದರು.ಕೃಷಿ ಇಲಾಖೆ ಮೂಲಕ ಸಬ್ಸಿಡಿ ದರದಲ್ಲಿ ಸಿಗಬಹುದಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಹೋಬಳಿ ಕೇಂದ್ರಗಳಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿಯೇ ಸಿಗುತ್ತವೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಎಲ್ಲಾ ಸೌಲಭ್ಯ ಒಂದೇ ಕಡೆ ಸಿಗಬೇಕೆಂಬ ಉದ್ದೇಶದಿಂದ ರೈತ ಸಂಪರ್ಕ ಕೇಂದ್ರಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದೆ. ರೈತರು ಮಳೆ ಪ್ರಮಾಣವನ್ನು ಅರಿತು ಕಡಿಮೆ ಮತ್ತು ದೀರ್ಘ ಅವಧಿಯಲ್ಲಿ ಬೆಳಗಳ ಬಗ್ಗೆ ನಿರ್ಧಾರ ಮಾಡಬೇಕು. ಲಾಭದಾಯಕ ಕೃಷಿ ಬಗ್ಗೆ ರೈತ ಸಂಪರ್ಕ ಕೇಂದ್ರಗಳು ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.ಕೃಷಿ ಇಲಾಖೆ ಬಗ್ಗೆ ಈ ಹಿಂದೆ ಸರಿಯಾಗಿ ಗಮನ ಹರಿಸಿದ್ದರೋ ಇಲ್ಲವೋ ಗೊತ್ತಿಲ್ಲ. ತಾಲೂಕು ಕೇಂದ್ರದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸ್ವಂತ ಕಟ್ಟಡವಿರಲಿಲ್ಲ. ನಾನು ಸಚಿವನಾದ ನಂತರ ಆ ಕಟ್ಟಡದ ನಿರ್ಮಾಣವೂ ಆಗುತ್ತಿದೆ. ಬೆಳ್ಳೂರು ಮತ್ತು ಕಸಬಾ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಚಿಣ್ಯದಲ್ಲಿಯೂ ಇದೇ ರೀತಿ ಕಟ್ಟಡ ನಿರ್ಮಿಸಲಾವುದು. ಇದಲ್ಲದೆ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ಒಟ್ಟು 15 ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.ಹೋಬಳಿ ಕೇಂದ್ರವಾಗಿರುವ ದೇವಲಾಪುರಕ್ಕೆ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆ, ನಾಡಕಚೇರಿ, ಸೆಸ್ಕಾಂ ಉಪಕೇಂದ್ರದ ಕಟ್ಟಡ, ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುವುದು. ಬಹಳ ವರ್ಷಗಳಿಂದ ಶೇ.57 ರಷ್ಟು ಹುದ್ದೆಗಳು ಖಾಲಿ ಇದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಲಾಖೆಯಲ್ಲಿ 950ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ. ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್‌ಕುಮಾರ್, ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೃಷಿ ಅಧಿಕಾರಿ ಅವಿನಾಶ್, ಕೆಆರ್‌ಡಿಎಲ್‌ನ ಇಇ ಸೋಮಶೇಖರ್, ಎಇಇ ಚೈತ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಕೆಪಿಸಿಸಿ ಎಸ್ಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ತಿಬ್ಬನಹಳ್ಳಿ ರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಡಿ.ಕೆ.ಸುರೇಶ್, ಡಿ.ಟಿ.ಕೃಷ್ಣೇಗೌಡ, ಮರಿಸ್ವಾಮಿ, ತಮ್ಮಣ್ಣಗೌಡ, ಟಿ.ಎಸ್.ಚಂದ್ರು ಸೇರಿದಂತೆ ಹಲವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button