ಇತ್ತೀಚಿನ ಸುದ್ದಿ

ಸಂವಿಧಾನ ದಿನಾಚರಣೆ ವಿಶೇಷ ಲೇಖನ. “ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಮನುಷ್ಯರು”

ಎಂದು ತೆಲುಗಿನ ಮಹಾಕವಿ ವೆಂಕಟ ಅಪ್ಪರಾವ್ ಗುರ್ಜಡ ಹೇಳಿದ್ದಾರೆ, “ ದೇಶವೆಂದರೆ ಮನುಷ್ಯರು” ಎಂದು ಸೋವಿಯತ್ ರಷ್ಯಾ ಸಂವಿಧಾನ ರಚನೆಕಾರರು ಭಾವಿಸಿದ್ದಾರೆ. ಹೀಗೆ ಭಾರತ ಎಂದರೆ ಬರೀ ದೇಶವಲ್ಲ. ಅನೇಕ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ ಸಮೃದ್ದವಾದ ದೇಶ. ಪ್ರಾಚೀನ ಕಾಲದಿಂದಲೂ ಹಲವಾರು ದೇಶಗಳ ಜನರು ಬಂದು ಬಾಳಿದ್ದಾರೆ, ಆಳಿದ್ದಾರೆ, ಇಲ್ಲಿನ ಸಂಪತ್ತನ್ನು ಲೂಟಿ ಮಾಡಿದ್ದಾರೆ. ಆದರೂ ಇಂದಿಗೂ ಸಮೃದ್ದವಾದ ದೇಶವಾಗಿ ಅಳಿಯದೇ ಉಳಿದಿದೆ. ಸಂಪತ್ತಿನ ಆಶೆಗೆ, ತಮ್ಮ ರಾಜ್ಯಗಳನ್ನು ವಿಸ್ತರಣೆ ಮಾಡುವ ಉದ್ದೇಶಕ್ಕಾಗಿ ಗ್ರೀಕರು, ಅರಬ್ಬರು, ನಿಗ್ರೋ, ಮಂಗೋಲಿಯನ್ನರು, ಆರ್ಯರು, ಪರ್ಷಿಯನ್ನರು, ಹೂಣರು, ಕುಶಾನರು, ಮೊಘಲರು, ಖಿಲ್ಜಿಗಳು, ತೊಘಲಕ್ರು, ಬಹಮನಿಗಳು, ಪೋರ್ಚ್ಗೀಸರು, ಪ್ರೆಂಚರು, ಡಚ್ಚರು ಮತ್ತು ಬ್ರಿಟಿಷರು ಈ ದೇಶಕ್ಕೆ ಬಂದರು. ಹೀಗೆ ದೇಶದಲ್ಲಿನ ಮೂಲ ನಿವಾಸಿಗಳು, ಹೊರಗಿನಿಂದ ಬಂದು ನೆಲಸಿದವರು ಸೇರಿ ಭಾರತದಲ್ಲಿ 2011ನೇ ಜನಗಣತಿ ಪ್ರಕಾರ 125 ಕೋಟಿ ಜನಸಂಖ್ಯೆ, 4,635 ಬಗೆಯ ಜನಾಂಗೀಯ ಪಂಗಡ, 325 ಭಾಷೆ, 19,569 ಮಾತೃ ಭಾಷೆಗಳು, 25 ಲಿಪಿಗಳನ್ನು ಹೊಂದಿದ್ದರೂ ಪರಸ್ಪರ ಹೊಂದಾಣಿಕೆಯಿಂದ ಬಾಳುತ್ತಿದ್ದಾರೆ. ಅದರಲ್ಲೂ ಭಾರತದ ತ್ರಿವರ್ಣ ಧ್ವಜದಂತೆ ವಿಶ್ವದ ಅತಿ ದೊಡ್ಡ ಜನಸಂಖ್ಯೆ ಹೊಂದಿದ ಮುಸ್ಲಿಂ, ಕ್ರಿಶ್ಚಿಯನ್, ಹಿಂದೂಗಳು ಸಹೋದರತ್ವದಿಂದ ಬದುಕಿ ವಿಶ್ವಕ್ಕೆ ಮಾದರಿಯಾಗಿದೆ. ಇದಕ್ಕೆ ಮೂಲ ಶಕ್ತಿ ಭಾರತದ ಸಂವಿಧಾನ. ಎಲ್ಲರಿಗೂ ಬದುಕಲು ಸಮಾನ ಹಕ್ಕು ನೀಡಿರುವ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ. 1946 ರಲ್ಲಿ ಚುನಾವಣೆಯ ಮೂಲಕ 389 ಮುಖಂಡರನ್ನೊಳಗೊಂಡ ಒಂದು ಸಂವಿಧಾನ ಸಭೆಯನ್ನು ರಚಿಸಲಾಯಿತು. ಸಭೆಯ ಸದಸ್ಯರು ಡಾ.ಬಾಬುರಾಜೇಂದ್ರ ಪ್ರಸಾದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ,
ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.


ಬಹುಧರ್ಮೀಯ ಭಾರತ ಸರ್ವಧರ್ಮಗಳ ದೇಶವಾಗಬೇಕು, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯಬೇಕೆನ್ನುವ ಆಶಯದೊಂದಿಗೆ ವಿಶ್ವದಲ್ಲಿ ಈ ಮೊದಲು ರಚನೆಯಾಗಿದ್ದ ಬ್ರಿಟಿಷ್, ಫ್ಯಾನ್ಸ್, ಅಮೆರಿಕಾ, ಕೆನಡಾ, ಸೋವಿಯತ್ ರಷ್ಯಾ ದೇಶಗಳ ಸಂವಿಧಾನದಿಂದ ಒಂದೊಂದು ಅಂಶಗಳನ್ನು ಪಡೆದು, 60 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಬೇಕಾದ ಅಂಶಗಳನ್ನು ಸೇರಿಸಿ ಸಂವಿಧಾನವನ್ನು ರಚಿಸಿದರು. ವಿಶ್ವದಲ್ಲಿ ಭಾರತ ಸಂವಿಧಾನವೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ.


ಸಂವಿಧಾನವನ್ನು ರಚಿಸಲು ಪೂರಕವಾಗಿ 13 ಸಮಿತಿಗಳನ್ನು ರಚಿಸಲಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್, ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಕೃಷ್ಣಸ್ವಾಮಿ ಅಯ್ಯರ್, ಡಾ.ಕೆ.ಎಂ.ಮುನ್ಸಿ, ಸೈಯದ್ ಮೊಹಮದ್ ಸಾದುಲ್ಲಾ, ಎನ್.ಮಾಧವರಾವ್, ಟಿ.ಟಿ.ಕೃಷ್ಣಮಾಚಾರಿಯನ್ನೊಳಗೊಂಡ 7 ಸದಸ್ಯರನ್ನು ಸಂವಿಧಾನದ ಮೂಲ ಕರಡು ರಚನಾ ಸಮಿತಿಯನ್ನು ನೇಮಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ಈ ಸಮಿತಿಯಲ್ಲಿನ ಒಬ್ಬ ಸದಸ್ಯರು ರಾಜೀನಾಮೆ ನೀಡಿದರು, ಒಬ್ಬರು ಮರಣನ್ನಪ್ಪಿದರು, ಒಬ್ಬರು ಅಮೆರಿಕದಲ್ಲಿ ಇದ್ದರು, ಒಬ್ಬರು ರಾಜ್ಯದ ಆಡಳಿತ ಕಾರ್ಯಗಳಲ್ಲಿ ನಿರತರಾಗಿದ್ದರು, ಮತ್ತೊಬ್ಬರು ಅನಾರೋಗ್ಯದ ಕಾರಣ ದೆಹಲಿಯಿಂದ ದೂರವೇ ಉಳಿದರು. ಹೀಗಾಗಿ ಕರಡನ್ನು ರಚಿಸುವ ಹೆಚ್ಚಿನ ಜವಾಬ್ದಾರಿ ಅಂಬೇಡ್ಕರ್ ಅವರ ಮೇಲೆ ಬಿತ್ತು. ಆದರೂ ಅವರು ಧೃತಿಗೆಡದೇ ದಿನದಲ್ಲಿ 18 ಗಂಟೆಗೂ ಹೆಚ್ಚು ಕೆಲಸ ನಿರ್ವಹಿಸಿ ಪೂರ್ಣಗೊಳಿಸಿದ್ದಾರೆ. ಆರ್ಥಿಕ ಸಂಷ್ಟದಲ್ಲಿರುವ, ಹಿಂದುಳಿದ ಜನರಿಗೆ ನೆರವಾಗಬೇಕು, ನೊಂದವರಿಗೆ ಸಾಂತ್ವನ ನೀಡುವ ಶಕ್ತಿಯಾಗಬೇಕೆಂಬ ಕನಸಿನಿಂದ ಸಂವಿಧಾನದ ಕರಡನ್ನು ಪೂರ್ಣಗೊಳಿಸಿ ಭಾರತದ ಸಂವಿಧಾನ ಎನ್ನುವ ಅಧ್ಬುತ ಶಿಲ್ಪವನ್ನು ನಿರ್ಮಿಸಿದ ಶಿಲ್ಪಿಯಾಗಿಡಾ.ಬಿ.ಆರ್.ಅಂಬೇಡ್ಕರ್ ಅವರು ಕಂಗೊಳಿಸುತ್ತಾರೆ.


499 ಪುಟಗಳ ಹೊತ್ತಿಗೆಯನ್ನು 6 ತಿಂಗಳ ಅವಧಿಯಲ್ಲಿ 254 ಪೆನ್ ನಿಬ್ಗಳನ್ನು ಬಳಸಿ ದೆಹಲಿಯ ಸೆಂಟ್ ಸ್ಟೀಫನ್ಸನ್ ಕಾಲೇಜಿನ ಪದವೀಧರರಾದ ಪ್ರೇಮ್ ಬಿಹಾರಿ ನಾರಾಯಣ ರಾಯ್ಜದಾ ಇವರು ಗೌರವಧನವನ್ನು ಪಡೆಯದೇ ಸುಂದರವಾಗಿ ಬರೆದು ಕೊಟ್ಟಿದ್ದಾರೆ. ಶಾಂತಿನಿಕೇತನದ ಪ್ರಾಂಶುಪಾಲರಾದ ನಂದಲಾಲ್ ಬೋಸ್ ರವರು ಸಂವಿಧಾನಕ್ಕೆ ಸುಂದರ ಕಲೆಯ ಸ್ಪರ್ಶ ನೀಡಿದರು. ಹೀಗೆ ನಮ್ಮ ಸಂವಿಧಾನವು 2ವರ್ಷ, 11 ತಿಂಗಳು, 18 ದಿನಗಳ ಅವಧಿಯಲ್ಲಿ ರಚನೆಯಾಗಿದೆ.


1948ರ ಫೆಬ್ರವರಿ-21 ರಲ್ಲಿ ಮೊದಲ ಕರಡು ಪ್ರತಿಯನ್ನು ಭಾರತ ಜನತೆಯ ಮುಂದಿಟ್ಟು, ಚರ್ಚೆಗೆ ಅವಕಾಶ ನೀಡಲಾಗಿ 7,625 ತಿದ್ದುಪಡಿಗಳನ್ನು ಪಡೆದು, ಅವುಗಳನ್ನು ಪರಿಶೀಲಿಸಿ ಸೂಕ್ತವಾದವುಗಳನ್ನು ಅಂಗೀಕರಿಸಿ 1949ರ ನವಂಬರ್-26 ರಂದು ಅಂತಿಮ ಕರಡನ್ನು ಅಂಗೀಕರಿಸಲಾಯಿತು. ಅದರ ನೆನಪಿಗಾಗಿ ಪ್ರತಿವರ್ಷ ನವಂಬರ್-26ನೇ ದಿನವನ್ನು ‘ಸಂವಿಧಾನ ದಿನ’ ವನ್ನಾಗಿ ಆಚರಿಸಲಾಗುತ್ತಿದೆ. 1950ರ ಜನವರಿ-26 ರಂದು ನಮ್ಮ ಸಂವಿಧಾನವನ್ನು ಜಾರಿಗೆ ತರಲಾಯಿತು. ನಮ್ಮ ಸಂವಿಧಾನವು 22 ಭಾಗಗಳು, 448 ಅನುಚ್ಛೇದಗಳು ಮತ್ತು 12 ಅನುಸೂಚಿಗಳನ್ನು ಒಳಗೊಂಡಿದೆ. ಕಾಲಮಾನ ಹೊಸ ಹಿನ್ನೆಲೆ ಮತ್ತು ಸಮಸ್ಯೆಗಳಿಗೆ ಅನುಗುಣವಾಗಿ 368ನೇ ಅನುಚ್ಛೇದದ ಮೂಲಕ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ನೀಡಿದೆ. ಆದರೆ ಈ ಅಧಿಕಾರವು ಬೇರೊಂದು ಸಂವಿಧಾನವನ್ನು ರಚಿಸಿ, ಈಗಿರುವ ಸಂವಿಧಾನವನ್ನು ಕೊನೆಗೊಳಿಸಲು ಯಾವುದೇ ಅವಕಾಶವಿಲ್ಲ. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಮಾನತೆಯ ಸ್ವಾತಂತ್ರ್ಯವನ್ನು ನೀಡಿದ್ದು, ಎಲ್ಲರೂ ಹೆಮ್ಮೆಯಿಂದ ಬದುಕಲು ಅವಕಾಶ ಕಲ್ಪಿಸಿದೆ. ಇಂತಹ ಸಂವಿಧಾನವನ್ನು ಗೌರವಿಸುವ, ಅದರ ಆಶಯಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ಸಂವಿಧಾನವು ಭಾರತೀಯರ ಮಹಾ ಗ್ರಂಥ. ಪ್ರತಿಯೊಬ್ಬ ಭಾರತೀಯರ ಮನೆಯಲ್ಲಿರಬೇಕಾದ ಸಂವಿಧಾನದ ಗ್ರಂಥ, ಮನದಲ್ಲಿ ಅದರ ಗೌರವ ಭಾವನೆ ತುಂಬಿರಬೇಕು. ಸಂವಿಧಾನದ ಅರಿವು ಮೂಡಿದರೆ ರಕ್ಷಿಸುವ ಹೊಣೆ ಮೂಡಲು ಸಾಧ್ಯ. ಭಾರತೀಯರು ಶತ ಶತಮಾನಗಳ ಕಾಲ ದಾಸ್ಯವನ್ನು ಅನುಭವಿಸಿದ್ದಾಗಿದೆ. ಅದರ ಸ್ವಾನುಭವ ನಮಗಿಲ್ಲದಿದ್ದರೂ ಇತಿಹಾಸ ಪರಿಚಯದಿಂದ ಆ ನೋವನ್ನು ಅರಿಯಬಹುದಾಗಿದೆ.

ಕರ್ನಾಟಕ ಉಚ್ಛನ್ಯಾಯಾಲಯ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್.ನಾಗಮೋಹನದಾಸ್ ರವರು ಬರೆದಿರುವ  ‘ಸಂವಿಧಾನ ಓದು’ ಕೃತಿಯ ಆಯ್ದೆ ಭಾಗಗಳನ್ನು “ಸಂವಿಧಾನ ದಿನ” ಓದುಗರಿಗೆ ಹಂಚಿಕೊಳ್ಳಲಾಗಿದೆ.  ಹೆಚ್ಚಿನ ಮಾಹಿತಿಯನ್ನು ಸಂವಿಧಾನ ಓದು ಕೃತಿಯಲ್ಲಿ ಪಡೆಯಬಹುದು.  
ವಿಶ್ವಕ್ಕೆ ಮಾದರಿಯಾದ ಬೃಹತ್ ಸಂವಿಧಾನವನ್ನು ರಚಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರು.

“ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದೂ ಕೆಟ್ಟದಾಗಿಬಿಡುವುದು ಖಂಡಿತ” ಎಂದಿದ್ದಾರೆ. ಆದ್ದರಿಂದ 75 ವಸಂತಗಳನ್ನು ಪೂರೈಸಿರುವ ನಮ್ಮ ಸಂವಿದಾನವನ್ನು ಅರಿಯಲು, ಅದರ ಆಶಯಗಳನ್ನು ರಕ್ಷಿಸಲು, ಗೌರವಿಸಲು ಭಾರತೀಯರಾದ ನಾವೆಲ್ಲಾ ಪಣತೊಡಬೇಕು.

-ಸಿ.ಮ.ಗುರುಬಸವರಾಜ ಹವ್ಯಾಸಿ ಬರಹಗಾರರು

Related Articles

Leave a Reply

Your email address will not be published. Required fields are marked *

Back to top button