ಬಿಬಿಎಂಪಿ ಚುನಾವಣೆ : ಜನವರಿಯಲ್ಲಿ ಸುಪ್ರೀಂ ವಿಚಾರಣೆ..
ಬೆಂಗಳೂರು, ಡಿ.17- ಬಿಬಿಎಂಪಿ ಚುನಾವಣಾ ತಕರಾರು ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಜನವರಿ ಮೊದಲ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಬಿಬಿಎಂಪಿಗೆ ಚುನಾವಣೆ ನಡೆಸಬೇಕೆಂದು ಕೋರಿ ವಿರೋಧ ಪಕ್ಷದ ಮಾಜಿ ನಾಯಕರಾದ ಎಂ.ಶಿವರಾಜ್ ಹಾಗೂ ವಾಜೀದ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್‍ನಲ್ಲಿ ಬರಬೇಕಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿಲ್ಲ.
ನಾಳೆಯಿಂದ ಜ.2ರವರೆಗೆ ಸುಪ್ರೀಂ ಕೋರ್ಟ್‍ಗೆ ಕ್ರಿಸ್‍ಮಸ್ ರಜೆ ಇದೆ. ಹಾಗಾಗಿ ಇನ್ನೂ ಮೂರು ವಾರಗಳ ಕಾಲ ಬಿಬಿಎಂಪಿ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಯುವುದಿಲ್ಲ. ಜನವರಿಯಲ್ಲಿ ಅರ್ಜಿ ವಿಚಾರಣೆ ನಡೆದರೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. 198 ವಾರ್ಡ್‍ಗಳಿದ್ದ ಬಿಬಿಎಂಪಿಯನ್ನು 243ಕ್ಕೆ ಹೆಚ್ಚಿಸಿ ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ನೇಮಿಸಿ ಚುನಾವಣೆಯನ್ನು ಮುಂದೂಡಲಾಗಿತ್ತು. ಇದನ್ನು ಪ್ರಶ್ನಿಸಿ ಎಂ.ಶಿವರಾಜ್ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಎರಡು ತಿಂಗಳೊಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ತಡೆಯಾಜ್ಞೆ ತೆರವುಗೊಳಿಸಿ ಚುನಾವಣೆ ನಡೆಸಬೇಕೆಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದಿಗೆ ನಿಗದಿಯಾಗಿತ್ತಾದರೂ ಇಂದು ವಿಚಾರಣೆಗೆ ಬರಲಿಲ್ಲ.
ಕ್ರಿಸ್‍ಮಸ್ ರಜೆ ಇರುವುದರಿಂದ ಇನ್ನು ಮೂರು ವಾರಗಳ ಕಾಲ ಸುಪ್ರೀಂಕೋರ್ಟ್‍ನಲ್ಲಿ ಯಾವುದೇ ಅರ್ಜಿ ವಿಚಾರಣೆ ನಡೆಯುವುದಿಲ್ಲ. ಹಾಗಾಗಿ ಬಿಬಿಎಂಪಿ ಚುನಾವಣೆ ಸಧ್ಯ ಆಕಾಂಕ್ಷಿಗಳ ಪಾಲಿಗೆ ಮರೀಚಿಕೆಯಾಗುವ ಸಾಧ್ಯತೆ ಇದೆ.