ಕೊಪ್ಪಳ: ನವೆಂಬರ್ 1 ಕನ್ನಡ ರಾಜ್ಯೋತ್ಸವ (kannada Rajyotsava) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ (Rajyotsava Award) ವಿಜೇತ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2020 -2021 ನೇ ಸಾಲಿನ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 66 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಕೊಪ್ಪಳ ಜಿಲ್ಲೆಗೆ ಈ ಬಾರಿ 2 ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದ್ದು, ಗಂಗಾವತಿ ಬೀಚಿ ಎಂದು ಹೆಸರಾದ ಪ್ರಾಣೇಶ್ (gangavathi pranesh ) ಹಾಗೂ ವೆಂಕಣ್ಣ ಚಿತ್ರಗಾರ ಗೌರವಕ್ಕೆ ಭಾಜನರಾಗಿದ್ದಾರೆ. ಶಿಲ್ಪಕಲೆಯಲ್ಲಿ ವೆಂಕಣ್ಣ ಚಿತ್ರಗಾರಗೆ, ಸಂಕೀರ್ಣ ಕ್ಷೇತ್ರದಲ್ಲಿ ಗಂಗಾವತಿ ಪ್ರಾಣೇಶ್ ಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಹಾಸ್ಯ ಕಲಾವಿದ ಪ್ರಾಣೇಶ್ ಸಂತಸ ವ್ಯಕ್ತಪಡಿಸಿದರು. ಸರ್ಕಾರ ನನ್ನ 30 ವರ್ಷಗಳ ಸಾಹಿತ್ಯ ಸೇವೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದರು.

ತಡವಾದರೂ ಪ್ರಶಸ್ತಿ ಬಂದಿರುವುದಕ್ಕೆ ಸಂತಸವಾಗಿದೆ
ಈ ಪ್ರಶಸ್ತಿ ಕನ್ನಡ ಜನತೆಗೆ ಸಂದಿದೆ, 60 ವರ್ಷದಲ್ಲಿ ಪ್ರಶಸ್ತಿ ನೀಡಿದರೆ ಲೇಟ್ ಆಗುತ್ತಾ ಎಂದು ನನಗೆ ಅನಿಸಿತ್ತು. ಸಣ್ಣ ವಯಸ್ಸಿನಲ್ಲಿ ಪ್ರಶಸ್ತಿ ಬಂದರೆ ಹೆಚ್ಚಿನ ಸೇವೆ ಸಲ್ಲಿಸಬಹುದು. ನಾನು ಇನ್ನೂ ಗಟ್ಟಿಯಾಗಿರುವುದರಿಂದ ಈ ಪ್ರಶಸ್ತಿ ಸ್ವೀಕರಿಸುತ್ತೇನೆ. ಸ್ವಲ್ಪ ಮೊದಲೇ ಪ್ರಶಸ್ತಿ ನೀಡಿದರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಪ್ರಶಸ್ತಿ ನೀಡಿರುವುದಕ್ಕೆ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು ಬಿ ಪ್ರಾಣೇಶ್.
ಪ್ರಶಸ್ತಿ ನಿರೀಕ್ಷೆ ಕೈ ಬಿಟ್ಟಿದ್ದೆ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ವೆಂಕಣ್ಣ ಚಿತ್ರಗಾರ್ ಮಾತನಾಡಿ, ರಾಜ್ಯೋತ್ಸವ ಪ್ರಶಸ್ತಿಗಾಗಿ ತೆಲೆಕೆಡಿಸಿಕೊಂಡಿರಲಿಲ್ಲ. ಈ ಬಾರಿ ಪ್ರಶಸ್ತಿ ಬಂದಿದೆ. 40 ವರ್ಷಗಳಿಂದ ರಥ,ದೇವರ ಮೂರ್ತಿಗಳ ತಯಾರಿಕೆ ಕೆಲಸ ಮಾಡುತ್ತಿದ್ದೇನೆ. 3-4 ವರ್ಷಗಳ ಹಿಂದೆ ಪ್ರಶಸ್ತಿಗಾಗಿ ಅರ್ಜಿ ಹಾಕಲಾಗಿತ್ತು, ಆಗ ಪ್ರಶಸ್ತಿ ಸಿಗಲಿಲ್ಲ. ಆಗ ಪ್ರಶಸ್ತಿ ಬಗ್ಗೆ ಕೈ ಬಿಟ್ಟಿದ್ದೇವು, ಈಗ ಮಕ್ಕಳು ಅರ್ಜಿ ಹಾಕಿದ್ದರು. ಈ ಬಾರಿ ದೇವರ ದಯೆಯಿಂದ ಪ್ರಶಸ್ತಿ ಬಂದಿದೆ. ಪ್ರಶಸ್ತಿ ಸಿಕ್ಕಿರುವುದು ಖುಷಿ, ಹೆಮ್ಮೆ ಆಗುತ್ತಿದೆ ಎಂದರು.