ಲಖ್ನೋ (ಅಕ್ಟೋಬರ್ 10); ಕಳೆದ ಭಾನುವಾರ ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ (Lakhimpur Kheri Violence) ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಮಗ ಆಶೀಶ್ ಮಿಶ್ರಾ (Ashis Mishra) ಕಾರು ಚಲಾಯಿಸಿದ್ದರು. ಈ ಕೃತ್ಯದಲ್ಲಿ ಸ್ಥಳದಲ್ಲೇ 4 ಜನ ರೈತರು ಮೃತಪಟ್ಟಿದ್ದರು. ನಂತರ ನಡೆದ ಗಲಭೆಯಲ್ಲಿ ಕನಿಷ್ಠ 5 ಜನ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸಚಿವ ಅಜಯ್ ಮಿಶ್ರಾ ಮತ್ತು ಅವರ ಮಗ ಆಶೀಶ್ ಮಿಶ್ರಾ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಪರಿಣಾಮ ಅವರ ವಿರುದ್ಧ ಸೆಕ್ಷನ್.302 ಅಡಿಯಲ್ಲಿ ಕೊಲೆ ಆರೋಪವನ್ನೂ ಹೊರಿಸಿ ಕೇಸ್ ದಾಖಲಿಸಲಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಪೊಲೀಸರಿಂದ ಕಣ್ತಪ್ಪಿಸಿಕೊಂಡಿದ್ದ ಆಶೀಶ್ ಮಿಶ್ರಾ ಇಂದು ಬೆಳಗ್ಗೆ 11 ಗಂಟೆಗೆ ಉತ್ತರಪ್ರದೇಶ ಪೊಲೀಸರ ಎದುರು ಹಾಜರ್ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಆಶೀಶ್ ಮಿಶ್ರಾ ಮತ್ತು ಮೋನು ಭೈಯ್ಯಾ ಅವರಿಗೆ ಕಳೆದ ಶುಕ್ರವಾರವೇ ಪೊಲೀಸರ ಎದುರು ಹಾಜರಾಗುವಂತೆ ಗಡುವು ನೀಡಲಾಗಿತ್ತು. ಆದರೆ, ಅವರು ಹಾಜರಾಗದ ಕಾರಣ ಮತ್ತೊಂದು ನೊಟೀಸ್ ನೀಡಲಾಗಿತ್ತು. ಹೀಗಾಗಿ ಇಬ್ಬರೂ ಇಂದು ಪೊಲೀಸರ ಎದುರು ಹಾಜರಾಗಲಿದ್ದಾರೆ ಎನ್ನಲಾಗಿದೆ.