ಇಂದು ತ್ರಿಪುರಾ, ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ; ಹೊಸ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತ್ರಿಪುರಾ ಮತ್ತು ಮಣಿಪುರಕ್ಕೆ ಭೇಟಿ ನೀಡಲಿದ್ದು, ಈಶಾನ್ಯ ರಾಜ್ಯಗಳಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಇಂಫಾಲ್‌ನಲ್ಲಿ 4,800 ಕೋಟಿ ರೂ. ಗೂ ಹೆಚ್ಚು ಮೌಲ್ಯದ 22 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಅಗರ್ತಲಾಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
30,000 ಚದರ ಮೀಟರ್‌ಗಳಲ್ಲಿ ಹರಡಿರುವ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದ ಈ ಹೊಸ ಅತ್ಯಾಧುನಿಕ ಟರ್ಮಿನಲ್ ಕಟ್ಟಡವನ್ನು ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ ಮತ್ತು ಇತ್ತೀಚಿನ ಐಟಿ ನೆಟ್‌ವರ್ಕ್-ಸಂಯೋಜಿತ ವ್ಯವಸ್ಥೆಯಿಂದ ಬೆಂಬಲಿತವಾಗಿದೆ ಎನ್ನಲಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಪ್ರಧಾನಮಂತ್ರಿ ಕಾರ್ಯಾಲಯ “ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಯು ದೇಶದಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿಯವರ ಪ್ರಯತ್ನಕ್ಕೆ ಅನುಗುಣವಾಗಿ ಒಂದು ಪ್ರಯತ್ನವಾಗಿದೆ” ಎಂದು ಮಾಹಿತಿ ನೀಡಿದೆ.
2 ಅಭಿವೃದ್ಧಿ ಉಪಕ್ರಮಗಳ ಆರಂಭ
ಇದರ ಜತೆಗೆ, ಮುಖ್ಯಮಂತ್ರಿ ತ್ರಿಪುರ ಗ್ರಾಮ ಸಮೃದ್ಧಿ ಯೋಜನೆ ಸೇರಿದಂತೆ ತ್ರಿಪುರಾ ರಾಜಧಾನಿಯಲ್ಲಿ ಎರಡು ಪ್ರಮುಖ ಅಭಿವೃದ್ಧಿ ಉಪಕ್ರಮಗಳನ್ನು ಪ್ರಧಾನಿ ಮೋದಿ ಪ್ರಾರಂಭಿಸಲಿದ್ದಾರೆ ಎಂದೂ ತಿಳಿದುಬಂದಿದೆ.
13 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
ಒಟ್ಟಾರೆ, ಮಣಿಪುರದಲ್ಲಿ ಸುಮಾರು 1,850 ಕೋಟಿ ರೂ. ಮೌಲ್ಯದ 13 ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಮತ್ತು 2,950 ಕೋಟಿ ರೂ. ಮೌಲ್ಯದ 9 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ರಸ್ತೆ ಮೂಲಸೌಕರ್ಯ, ಕುಡಿಯುವ ನೀರು ಪೂರೈಕೆ, ಆರೋಗ್ಯ, ನಗರಾಭಿವೃದ್ಧಿ, ವಸತಿ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿವೆ ಎಂದೂ ಪಿಎಂ ಕಚೇರಿ (PMO) ಹೇಳಿದೆ.
ಇದರ ಜತೆಗೆ, 110 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ನಿರ್ಮಾಣದ ಶಂಕುಸ್ಥಾಪನೆಯನ್ನು ಅವರು ನೆರವೇರಿಸಲಿದ್ದಾರೆ. ಹಾಗೂ, 75 ಕೋಟಿ ರೂ. ವೆಚ್ಚದಲ್ಲಿ NH-37ನಲ್ಲಿ ಬರಾಕ್ ನದಿಯ ಮೇಲೆ ನಿರ್ಮಿಸಲಾದ ಉಕ್ಕಿನ ಸೇತುವೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಸೇತುವೆಯು ಇಂಫಾಲ್‌ನಿಂದ ಸಿಲ್ಚಾರ್‌ಗೆ ವರ್ಷಪೂರ್ತಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ಮೊಬೈಲ್ ಟವರ್ ಸಮರ್ಪಣೆ
ಇದರೊಂದಿಗೆ, ಸುಮಾರು 1,100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 2,387 ಮೊಬೈಲ್ ಟವರ್‌ಗಳನ್ನು ಮಣಿಪುರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸಮರ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣಾ ಕಣದಲ್ಲಿರುವ ರಾಜ್ಯಗಳಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಮಣಿಪುರ ವಿಧಾನಸಭೆ ಚುನಾವಣೆ ಮಾರ್ಚ್ 2022ರಲ್ಲಿ ನಡೆಯಲಿದೆ.