ಕ್ರೈಂ
ಬಸ್‌ನಲ್ಲಿ 4.59 ಲಕ್ಷ ರೂ. ಮೌಲ್ಯದ ನಗ, ನಗದು ಕಳವು
ಮಂಗಳೂರು, ಸೆ.28: ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಒಟ್ಟು 4.59 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವಾಗಿದೆ.
ಮಂಗಳೂರಿನ ಕಸಬ ಬಜಾರ್ ನಿವಾಸಿ ರೇಖಾ ಶೆಟ್ಟಿ ಅವರ ಪತಿ ಮತ್ತು ಪುತ್ರನ ಜತೆ ಸೆ.16ರಂದು ಕೆಎಸ್‌ಆರ್‌ಟಿಸಿ ಐರಾವತ ಬಸ್‌ನಲ್ಲಿ ರಾತ್ರಿ 10 ಗಂಟೆಗೆ ಪ್ರಯಾಣ ಬೆಳೆಸಿದ್ದರು. ಮರುದಿನ ಬೆಳಗ್ಗೆ ಬೆಂಗಳೂರು ತಲುಪಿ ಅಲ್ಲಿಂದ ಆಟೋ ರಿಕ್ಷಾದಲ್ಲಿ ಗಾಂಧಿನಗರದ ಹೊಟೇಲ್‌ಗೆ ಹೋಗಿದ್ದರು. ಅಲ್ಲಿ ಬ್ಯಾಗ್ ತೆರೆದು ನೋಡಿದಾಗ 49 ಸಾವಿರ ರೂ. ನಗದು, 2 ಲಕ್ಷ ರೂ. ಮೌಲ್ಯದ ಮೂರು ವಜ್ರದ ಉಂಗುರಗಳು, 50 ಸಾವಿರ ರೂ. ಮೌಲ್ಯದ ವಜ್ರದ ಕಿವಿಯೋಲೆ, 80 ಸಾವಿರ ರೂ. ಮೌಲ್ಯದ ವಜ್ರದ ಲಾಕೆಟ್ ಇರುವ ಸರ, 80 ಸಾವಿರ ರೂ. ಮೌಲ್ಯದ 2 ಚಿನ್ನದ ಬಳೆಗಳನ್ನು ಬಸ್‌ನಲ್ಲಿ ಪ್ರಯಾಣಿಸುವಾಗ ಕಳವಾಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.