ಕ್ರೀಡೆ

ಜೈ ಹೇಳಿದ ಮುಂಬೈ ಇಂಡಿಯನ್ಸ್‌

ಅಬುಧಾಬಿ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಯುಎಇ ಆವೃತ್ತಿಯಲ್ಲಿ ಮೊದಲ ಗೆಲುವಿನ ಸಂಭ್ರಮ ಆಚರಿಸಿದೆ. ಹ್ಯಾಟ್ರಿಕ್‌ ಸೋಲಿಗೆ ತುತ್ತಾಗಿ ತೀವ್ರ ಹತಾಶೆಯಲ್ಲಿದ್ದ ರೋಹಿತ್‌ ಪಡೆ ಮಂಗಳವಾರ ರಾತ್ರಿಯ ಸಣ್ಣ ಮೊತ್ತದ ಮೇಲಾಟದಲ್ಲಿ ಪಂಜಾಬ್‌ ಕಿಂಗ್ಸ್‌ಗೆ 6 ವಿಕೆಟ್‌ ಸೋಲುಣಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 135 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದರೆ, ಮುಂಬೈ 19 ಓವರ್‌ಗಳಲ್ಲಿ 4 ವಿಕೆಟಿಗೆ 137 ರನ್‌ ಮಾಡಿತು.

37 ಎಸೆತಗಳಿಂದ 45 ರನ್‌ ಬಾರಿಸಿದ ಸೌರಭ್‌ ತಿವಾರಿ (3 ಬೌಂಡರಿ, 2 ಸಿಕ್ಸರ್‌) ಮುಂಬೈ ಓಟವನ್ನು ಚುರುಕುಗೊಳಿಸಿದರು. ಬಳಿಕ ಹಾರ್ದಿಕ್‌ ಪಾಂಡ್ಯ ಮತ್ತು ಕೈರನ್‌ ಪೊಲಾರ್ಡ್‌ ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತರು. ಇವರಿಂದ ಮುರಿಯದ 5ನೇ ವಿಕೆಟಿಗೆ 30 ಎಸೆತಗಳಿಂದ 40 ರನ್‌ ಒಟ್ಟುಗೂಡಿತು. ಪಾಂಡ್ಯ ಅಜೇಯ 40 ರನ್‌ (30 ಎಸೆತ, 4 ಬೌಂಡರಿ, 2 ಸಿಕ್ಸರ್‌), ಪೊಲಾರ್ಡ್‌ 7 ಎಸೆತಗಳಿಂದ ಔಟಾಗದೆ 15 ರನ್‌ ಬಾರಿಸಿದರು (1 ಬೌಂಡರಿ, 1 ಸಿಕ್ಸರ್‌). ಶಮಿ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಪಾಂಡ್ಯ ಮುಂಬೈ ಗೆಲುವನ್ನು ಘೋಷಿಸಿದರು.


ಈ ಪಂದ್ಯದಿಂದ ಪಂಜಾಬ್‌ ಮಾಯಾಂಕ್‌ ಅಗರ್ವಾಲ್‌ ಅವರನ್ನು ಹೊರಗಿರಿಸಲಾಗಿತ್ತು. ಇವರ ಬದಲು ಮನ್‌ದೀಪ್‌ ಸಿಂಗ್‌ ಇನ್ನಿಂಗ್ಸ್‌ ಆರಂಭಿಸಿದರು. ರಾಹುಲ್‌ (21) ಮತ್ತು ಮನ್‌ದೀಪ್‌ (15) ಸಿಡಿಯುವ ಸೂಚನೆ ನೀಡುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಈ ನಡುವೆ ಯುನಿವರ್ಸ್‌ ಬಾಸ್‌ ಗೇಲ್‌ ಠುಸ್‌ ಆದರು. ಅವರ ಗಳಿಕೆ ಒಂದೇ ರನ್‌. ರಾಹುಲ್‌ ಮತ್ತು ಗೇಲ್‌ ಅವರನ್ನು ಕೈರನ್‌ ಪೊಲಾರ್ಡ್‌ ಒಂದೇ ಓವರ್‌ನಲ್ಲಿ ಉರುಳಿಸಿ ಪಂಜಾಬ್‌ಗ ಬಲವಾದ ಆಘಾತವಿಕ್ಕಿದರು.

ನಿಕೋಲಸ್‌ ಪೂರಣ್‌ (2) ಅವರ ರನ್‌ ಬರಗಾಲ ಮತ್ತೆ ಮುಂದುವರಿಯಿತು. 8ನೇ ಓವರ್‌ ವೇಳೆ 48 ರನ್ನಿಗೆ 4 ವಿಕೆಟ್‌ ಬಿತ್ತು. ಪಂಜಾಬ್‌ನ ಕೊನೆಯ ನಂಬುಗೆಯ ಬ್ಯಾಟಿಂಗ್‌ ಜೋಡಿಯಾದ ಐಡನ್‌ ಮಾರ್ಕ್‌ರಮ್‌ ಮತ್ತು ದೀಪಕ್‌ ಹೂಡಾ 5ನೇ ವಿಕೆಟಿಗೆ ಜತೆಗೂಡಿದ ಬಳಿಕ ಸ್ಕೋರ್‌ಬೋರ್ಡ್‌ ನಿಧಾನವಾಗಿ ಬೆಳೆಯತೊಡಗಿತು. ತಂಡಕ್ಕೆ ಮತ್ತೆ ಹಾನಿಯಾಗದಂತೆ ನೋಡಿಕೊಂಡು ಮೊತ್ತವನ್ನು ನೂರರ ಗಡಿ ದಾಟಿಸಿದರು. ಈ ಹಂತದಲ್ಲಿ ದ್ವಿತೀಯ ಸ್ಪೆಲ್‌ ಬೌಲಿಂಗ್‌ ದಾಳಿಗಿಳಿದ ಟ್ರೆಂಟ್‌ ಬೌಲ್ಟ್ ದುಬಾರಿಯಾದರು.

Related Articles

Leave a Reply

Your email address will not be published. Required fields are marked *

Back to top button