ಇಂದಿನಿಂದ 15 ದಿನ ಶಾಲೆ-ಕಾಲೇಜು ಬಂದ್!
ಬೆಂಗಳೂರು: ಮಹಾಮಾರಿ ಕೊರೊನಾ ಒಮಿಕ್ರಾನ್ ಆತಂಕ ಹಿನ್ನೆಲೆ ಬೆಂಗಳೂರಿನಲ್ಲಿ ನೈಟ್ಕರ್ಫ್ಯೂ, ವೀಕೆಂಡ್ ಕರ್ಫ್ಯೂ, 50:50 ರೂಲ್ಸ್ ಜೊತೆಗೆ ಇಂದಿನಿಂದ ಇನ್ನೆರಡು ವಾರ ಎಲ್ಲಾ ಶಾಲಾ ಕಾಲೇಜುಗಳು ಬಂದ್ ಆಗಲಿವೆ. LKG & UKG, 1 ರಿಂದ 9ನೇ ತರಗತಿ ಸೇರಿದಂತೆ ಎಲ್ಲಾ ಪದವಿ ತರಗತಿಗಳು ಕ್ಲೋಸ್ ಆಗಲಿದ್ದು 2 ವಾರಗಳವರೆಗೆ ಈ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪಾಠ ನಡೆಯಲಿದೆ. ಆದ್ರೆ, 10ನೇ ತರಗತಿ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ಕ್ಲಾಸ್ ನಡೆಯುತ್ತೆ. ಅದ್ರಂತೆ ಮೆಡಿಕಲ್, ಪ್ಯಾರಾ ಮೆಡಿಕಲ್ ಕಾಲೇಜುಗಳ ಕ್ಲಾಸ್ ನಡೆಯುತ್ತೆ. ಸದ್ಯ ಸರ್ಕಾರದ ವಿರುದ್ಧ ಖಾಸಗಿ ಶಾಲಾ ಒಕ್ಕೂಟ ಗರಂ ಆಗಿದೆ.
ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ 2 ವರ್ಷ ಶಾಲೆಗಳು ಕ್ಲೋಸ್ ಆಗಿದ್ದವು. ನಾಲ್ಕು ತಿಂಗಳು.. ಜಸ್ಟ್ ನಾಲ್ಕು ತಿಂಗಳ ಹಿಂದಷ್ಟೇ ಆನ್ಲೈನ್ ಕ್ಲಾಸ್ಗೆ ಬೈ ಹೇಳಿ ಶಾಲೆಗೆ ಬರೋಕೆ ಶುರು ಮಾಡಿದ್ರು. ಆದ್ರೀಗ, ಶಾಲೆಗಳ ಮೇಲೆ ಮತ್ತೆ ಕೊರೊನಾ, ಒಮಿಕ್ರಾನ್ ಕರಿನೆರಳು ಬಿದ್ದಿದೆ. ಮಕ್ಕಳು ಮನೆಯಲ್ಲೇ ಇರ್ಬೇಕಾದ ಪರಿಸ್ಥಿತಿ ಬಂದಿದೆ.
ಮೊದಲ ಹಂತದಲ್ಲಿ 2021 ಆ.23 ರಿಂದ 9,10 ಮತ್ತು ಪಿಯುಸಿ ತರಗತಿಗಳನ್ನ ಶಿಕ್ಷಣ ಇಲಾಖೆ ಆರಂಭಿಸಿತ್ತು. ಎರಡನೇ ಹಂತದಲ್ಲಿ 2021 ಸೆ.6ರಿಂದ 6,7 ಮತ್ತು 8ನೇ ತರಗತಿ ಆರಂಭಗೊಂಡಿತ್ತು. ಮೂರನೇ ಹಂತದಲ್ಲಿ 2021 ಅ.18ರಿಂದ 1 ರಿಂದ 5ನೇ ತರಗತಿ ಆರಂಭವಾಗಿತ್ತು. ಇದೀಗ ಮತ್ತೆ ಇಂದಿನಿಂದ 1 ರಿಂದ 9ನೇ ತರಗತಿ ಬಂದ್ ಆಗಿದೆ. 2 ವಾರಗಳ ಕಾಲ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನರಹಿತ ಶಾಲೆಗಳು ಕ್ಲೋಸ್ ಆಗಲಿವೆ. ಒಂದು ವೇಳೆ ಸೋಂಕು ಹೆಚ್ಚಾದ್ರೆ ಮತ್ತಷ್ಟು ದಿನ ಶಾಲೆ ಕ್ಲೋಸ್ ಆಗುವ ಸಾಧ್ಯತೆ ಇದೆ. ಇತರೆ ಜಿಲ್ಲೆಗಳಲ್ಲೂ ಪಾಸಿಟಿವಿ ರೇಟ್ 2ಕ್ಕಿಂತ ಜಾಸ್ತಿಯಾದ್ರೆ ಅಲ್ಲೂ ಇದೇ ಅಸ್ತ್ರ ಪ್ರಯೋಗವಾಗಲಿದೆ.
ಸರ್ಕಾರದ ವಿರುದ್ಧ ಖಾಸಗಿ ಶಾಲಾ ಒಕ್ಕೂಟ ಗರಂ
ಇಂದಿನಿಂದ 15 ದಿನ ಶಾಲೆ ಬಂದ್ ಆಗ್ತಿರೋದಕ್ಕೆ ಖಾಸಗಿ ಶಾಲಾ ಒಕ್ಕೂಟ ಆಕ್ರೋಶ ಹೊರ ಹಾಕಿದೆ. ಶಾಲೆ ಓಪನ್ ಆಗಿ 4 ತಿಂಗಳಾಗಿದೆ. ಈಗ ಮತ್ತೆ ಶಾಲಾ ಬಾಗಿಲು ಮುಚ್ಚಿಸಿದ್ರೆ ಕಲಿಕೆಗೆ ತೊಂದರೆ ಆಗುತ್ತೆ. ಎಲ್ಲ ಶಾಲೆಗಳನ್ನ ಬಂದ್ ಮಾಡುವ ಬದಲಿಗೆ, ಸೋಂಕು ಕಾಣಿಸಿಕೊಂಡ ಶಾಲೆಗಳನ್ನ ಮಾತ್ರ ಕ್ಲೋಸ್ ಮಾಡಬೇಕು. ಆನ್ಲೈನ್ ಶಿಕ್ಷಣ ಸಮರ್ಪಕವಾದ ವ್ಯವಸ್ಥೆ ಅಲ್ಲ ಅಂತಾ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಕಿಡಿಕಾರಿದ್ದಾರೆ.
ಬಂದ್ ಬದಲಿಗೆ ಪರ್ಯಾಯ ಮಾರ್ಗ ಬಳಸುವಂತೆ ಒತ್ತಾಯಿಸಿದ್ದಾರೆ. ಪಾಳಿ ಪದ್ದತಿಯಲ್ಲಿ ಶಾಲೆ ಓಪನ್ಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸಂಪೂರ್ಣ ಬಂದ್ ನಿಂದ ಶೈಕ್ಷಣಿಕ ವ್ಯವಸ್ಥೆಗೆ ಮಾರಕ. ಹೀಗಾಗಿ ಪಾಳಿ ಪದ್ದತಿಯನ್ನು ಅನುಸರಿಸೊಕೆ ಸರ್ಕಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಸಲಹೆ ನೀಡಿದೆ. ಇಂದು ಈ ಬಗ್ಗೆ ಮಾತನಾಡಲು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮುಖ್ಯ ಮಂತ್ರಿಗಳನ್ನ ಭೇಟಿಯಾಗಲಿದ್ದಾರೆ. ಈಗಾಗಲೇ ಶಿಕ್ಷಣ ಸಚಿವರಿಗೂ ಪತ್ರ ಬರೆಯಲಾಗಿದೆ.
ಇತ್ತ ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಗೋವಾ ರಾಜ್ಯಗಳು ಶಾಲೆಗಳನ್ನ ಬಂದ್ ಮಾಡಿವೆ. ಇವೆಲ್ಲ ಅಂಶಗಳನ್ನ ಗಮನದಲ್ಲಿಟ್ಟುಕೊಂಡು, ಪಾಸಿಟಿವ್ ದರ ಆಧರಿಸಿ ಸಿಲಿಕಾನ್ ಸಿಟಿಯಲ್ಲಿ ಸರ್ಕಾರ ಶಾಲೆಗಳನ್ನ ಬಂದ್ ಮಾಡಿದೆ. ಆದ್ರೆ ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳ ಪಾಸಿಟಿವ್ ರೇಟ್ ಶೇಕಡಾ 2ಕ್ಕಿಂತ ಜಾಸ್ತಿಯಾದ್ರೆ ಅಲ್ಲಿನ ಶಾಲೆಗಳು ಸಹ ಬಂದ್ ಆಗೋ ಎಲ್ಲಾ ಸಾಧ್ಯತೆ ಇದೆ.