ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಕೆ: ಜಾವೇದ್ ಅಖ್ತರ್ ವಿರುದ್ಧ ನೊಟೀಸ್
ಜನಪ್ರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಕೆಲವು ದಿನಗಳ ಹಿಂದೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್ ಅನ್ನು ಕಟುವಾಗಿ ಟೀಕಿಸಿದ್ದರು. ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸದಸ್ಯರ ಕಣ್ಣು ಕೆಂಪಾಗಿಸಿತ್ತು.
ಸಂದರ್ಶನದಲ್ಲಿ ಮಾತನಾಡುತ್ತಾ ಅಫ್ಘಾನಿಸ್ತಾನದಲ್ಲಿ ಹಿಂಸಾತ್ಮಕ ಆಡಳಿತ ಮಾಡುತ್ತಿರುವ ತಾಲಿಬಾನಿಗಳನ್ನೂ ಆರ್‌ಎಸ್‌ಎಸ್ ಅನ್ನೂ ಹೋಲಿಸಿದ್ದರು. ಎರಡೂ ಸಂಘಟನೆಗಳು ಒಂದೇ ಮಾದರಿ ಎಂದು ಹೇಳಿದ್ದರು. ಇದು ವಿವಾದ ಎಬ್ಬಿಸಿತ್ತು.
ಜಾವೇದ್ ಅಖ್ತರ್ ನಿವಾಸದ ಎದುರು ಯುವ ಬಿಜೆಪಿ ಸದಸ್ಯರು ಪ್ರತಿಭಟನೆ ಮಾಡಿದ್ದರು. ಬಿಜೆಪಿಯ ಹಲವು ಮುಖಂಡರು, ಸಂಸದರು, ಆರ್‌ಎಸ್‌ಎಸ್‌ನ ಮುಖಂಡರು ಜಾವೇದ್ ಅಖ್ತರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಜಾವೇದ್ ಅಖ್ತರ್‌ಗೆ ನೊಟೀಸ್ ಜಾರಿ ಮಾಡಲಾಗಿದೆ.
ವಕೀಲ ಸಂತೋಶ್ ದುಬೆ ಎಂಬುವರು ಜಾವೇದ್ ಅಖ್ತರ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಜಾವೇದ್ ಅಖ್ತರ್ ಕೂಡಲೇ ಲಿಖಿತ ಕ್ಷಮಾಪಣೆ ಕೇಳಬೇಕು. ಏಳು ದಿನಗಳ ಒಳಗಾಗಿ ಜಾವೇದ್ ಅಖ್ತರ್ ಕ್ಷಮೆ ಕೇಳದಿದ್ದರೆ ತಾವು ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಸಂತೋಶ್ ದುಬೆ.
”ಏಳು ದಿನಗಳ ಒಳಗೆ ಜಾವೇದ್ ಅಖ್ತರ್ ಕ್ಷಮೆ ಕೇಳದಿದ್ದಲ್ಲಿ ಅವರ ವಿರುದ್ಧ 100 ಕೋಟಿಗಳ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿದ್ದೇನೆ” ಎಂದು ಸಂತೋಶ್ ಹೇಳಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಜಾವೇದ್ ಅಖ್ತರ್, ”ಯಾವುದೇ ಧರ್ಮದ ಬಲಪಂಥೀಯರನ್ನು ಗಮನಿಸಿ ಅವರೆಲ್ಲ ಒಂದೇ ಅಗಿರುತ್ತಾರೆ. ಮುಸ್ಲಿಂ ಬಲಪಂಥೀಯರು, ಕ್ರಿಶ್ಚಿಯನ್ ಬಲಪಂಥೀಯರು, ಹಿಂದಿ ಬಲಪಂಥೀಯರು ಎಲ್ಲರೂ ಒಂದೇ. ಎಲ್ಲರೂ ಧರ್ಮವೇ ದೊಡ್ಡದು, ಧರ್ಮಕ್ಕೆ ಮಿಗಿಲಾದ ಕಾನೂನು ಇಲ್ಲವೆಂದು ವಾದಿಸುತ್ತಾರೆ. ಆಧುನಿಕತೆಯು ಮನುಷ್ಯನನ್ನು ಹಾಳು ಮಾಡುತ್ತದೆ ಎನ್ನುತ್ತಾರೆ. ಎಲ್ಲ ಧರ್ಮದ ಬಲಪಂಥೀಯರು ಒಂದೇ ಆದರೆ ಮುಖಗಳಷ್ಟೆ ಬದಲು” ಎಂದಿದ್ದರು ಜಾವೇದ್.
ಮುಂದುವರೆದು, ”ಯಾವ ಕಾನೂನು ಸಹ ಧರ್ಮಕ್ಕಿಂತ ದೊಡ್ಡದಲ್ಲ ಎಂಬುದು ತಾಲಿಬಾನಿಗಳ ವಾದ. ಅದೇ ವಾದವನ್ನು ಹಿಂದು ಬಲಪಂಥೀಯರು ಸಹ ಮಾಡುತ್ತಾರೆ. ಬಳೆ ಮಾರುವ ಮುಸ್ಲಿಂ ಅನ್ನು ಹೊಡೆಯುವುದು, ಟೀ ಮಾರುವ ಮುಸ್ಲಿಂ ಮೇಲೆ ದಾಳಿ ಮಾಡುವುದು ಇದೆಲ್ಲವೂ ಇವರೂ ಸಹ ತಾಲಿಬಾನಿಗಳಾಗುತ್ತಿರುವ ಕುರುಹುಗಳು. ಇಬ್ಬರೂ ಒಂದೇ ಆದರೆ ಹೆಸರುಗಳು ಮಾತ್ರ ಬೇರೆ” ಎಂದು ಜಾವೇದ್ ಅಖ್ತರ್ ಹಿಂದು ಬಲಪಂಥೀಯರನ್ನು ತಾಲಿಬಾನ್‌ಗೆ ಹೋಲಿಸಿದ್ದರು.
‘ತಾಲಿಬಾನಿಗಳಿಗೆ ಇಸ್ಲಾಮಿಕ್ ರಾಷ್ಟ್ರ ಬೇಕು ಹಾಗೆಯೇ ಇವರಿಗೆ ಹಿಂದು ರಾಷ್ಟ್ರ ಬೇಕು. ತಾಲಿಬಾನಿಗಳ ಕಾರ್ಯಗಳು ಖಂಡನೀಯ. ಅವರು ಅನಾಗರೀಕರು. ಹಾಗೆಯೇ ಇತರೆ ಧರ್ಮದ ಬಲಪಂಥೀಯರು ಸಹ. ಹಾಗೂ ಆರ್‌ಎಸ್‌ಎಸ್, ವಿಎಚ್‌ಪಿ, ಬಜರಂಗದಳಕ್ಕೆ ಬೆಂಬಲ ನೀಡುವವರೂ ಸಹ” ಎಂದಿದ್ದರು ಜಾವೇದ್ ಅಖ್ತರ್.
ಜಾವೇದ್ ಅಖ್ತರ್ ಮಾತಿಗೆ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಇತರೆ ಹಿಂದು ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ಶಾಸಕ ರಾಮ್ ಕದಮ್ ಮಾತನಾಡಿ, ಜಾವೇದ್ ಅಖ್ತರ್ ಕೆಲಸ ಮಾಡಿರುವ ಯಾವುದೆ ಸಿನಿಮಾವನ್ನು ದೇಶದೆಲ್ಲೆಡೆ ಬಿಡುಗಡೆ ಆಗಲು ಬಿಡುವುದಿಲ್ಲ. ಜಾವೇದ್ ಅಖ್ತರ್ ಎರಡೂ ಕೈ ಜೋಡಿಸಿ ಆರ್‌ಎಸ್‌ಎಸ್‌ಗೆ, ವಿಎಚ್‌ಪಿಗೆ, ಭಜರಂಗ ದಳಕ್ಕೆ ಕ್ಷಮೆ ಕೋರಬೇಕು” ಎಂದಿದ್ದರು.
ಆರ್‌ಎಸ್‌ಎಸ್ ಹಿನ್ನೆಲೆಯ ಮುಖಂಡರು ಸರ್ಕಾರವನ್ನು ರಾಜಧರ್ಮದ ಮೂಲಕ ಪಾಲಿಸುತ್ತಿದ್ದಾರೆ. ಅದೇ ಒಂದೊಮ್ಮೆ ತಾಲಿಬಾನ್ ಆಡಳಿತ ಇದ್ದಿದ್ದರೆ ಜಾವೇದ್ ಅಖ್ತರ್ ಈ ಮಾತನ್ನು ಹೇಳಲು ಸಾಧ್ಯವಾಗುತ್ತಿತ್ತೆ. ಆರ್‌ಎಸ್‌ಎಸ್ ಅನ್ನು ತಾಲಿಬಾನಿಗಳ ಜೊತೆಗೆ ಹೋಲಿಸಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಜಾವೇದ್ ಅಖ್ತರ್ ಅಪಮಾನ ಮಾಡಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು” ಎಂದು ಬಿಜೆಪಿ ಶಾಸಕ ರಾಮ್ ಕದಮ್ ಹೇಳಿದ್ದರು.