ರಾಜ್ಯ

ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ನೀಡುವ 1 ಲಕ್ಷ ರೂ. ಪರಿಹಾರದಲ್ಲಿ ಷರತ್ತು ಸಡಿಲಿಸಿದ ಸರ್ಕಾರ..

ಬೆಂಗಳೂರು, ಡಿಸೆಂಬರ್ 3: ಕೊರೊನಾ ವೈರಸ್‌ನ ಎರಡೂ ಅಲೆಗಳಲ್ಲೂ ಸಾವಿರಾರು ಸೋಂಕಿತರು ಸಾವನ್ನಪ್ಪಿದ್ದರು. ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ಘೋಷಿಸಿತ್ತು.

ಬಿಪಿಎಲ್ ಕಾರ್ಡ್​​ ಹೊಂದಿರುವ ಕುಟುಂಬದ ದುಡಿಯುವ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರೆ, ಒಂದು ಕುಟುಂಬದಲ್ಲಿ ಆ ರೀತಿಯ ಒಬ್ಬರಿಗೆ ಮಾತ್ರ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಈ ಮೊದಲು ತಿಳಿಸಿತ್ತು. ಈಗ ಆ ನಿಯಮಕ್ಕೆ ಬದಲಾವಣೆ ತರಲಾಗಿದೆ.

ಬಿಪಿಎಲ್ ಕುಟುಂಬದ ಯಾವುದೇ ವ್ಯಕ್ತಿ ಕೊರೊನಾದಿಂದ ಮೃತರಾಗಿದ್ದರೆ, ಅವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ದುಡಿಯುತ್ತಿದ್ದ ವ್ಯಕ್ತಿಯ ಸಾವಿಗೆ ಮಾತ್ರ ಪರಿಹಾರ ಎಂಬ ನಿಬಂಧನೆಯನ್ನು ತೆಗೆದು ಹಾಕಲಾಗಿದೆ. ಇದೀಗ ಬಿಪಿಎಲ್ ಕುಟುಂಬದ ಯಾವುದೇ ಸದಸ್ಯ ಕೊರೊನಾದಿಂದ ಮೃತರಾಗಿದ್ದರೂ 1 ಲಕ್ಷ ರೂ. ಪರಿಹಾರ ನೀಡಲಾಗುವುದು.

ಪರಿಹಾರ ನೀಡಲು ಕೊವಿಡ್‌ನಿಂದ ಮೃತ ಪಟ್ಟ ವ್ಯಕ್ತಿಯ ವಯಸ್ಸಿನ ನಿಬಂಧನೆಯೂ ಇಲ್ಲ ಎಂದು ಹೊಸದಾಗಿ ತಿದ್ದುಪಡಿ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಈ ಮಧ್ಯೆ ಕರ್ನಾಟಕದ ಇಬ್ಬರಿಗೆ ಓಮಿಕ್ರಾನ್ ರೂಪಾಂತರದ ಸೋಂಕು ದೃಢಪಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಓಮಿಕ್ರಾನ್ ಹರಡಿದ್ದರೂ ದೊಡ್ಡಮಟ್ಟದ ಆತಂಕವಿಲ್ಲ. ಕೇಂದ್ರ ಆರೋಗ್ಯ ಸಚಿವರೊಂದಿಗೆ ಈ ಕುರಿತು ಸ್ವತಃ ಚರ್ಚಿಸಿದ್ದೇನೆ. ಬೆಂಗಳೂರಿಗೆ ಹಿಂದಿರುಗಿದ ತಜ್ಞರ ಜತೆ ತುರ್ತು ಸಭೆ ಮಾಡಿ ಚರ್ಚೆ ನಡೆಸುತ್ತೇನೆ. ನಂತರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button