ಕ್ರೀಡೆ

Champions Trophy: ಸೆಮಿಫೈನಲ್​​ನಲ್ಲಿ ಆಸ್ಟ್ರೇಲಿಯಾ ಬಗ್ಗುಬಡಿದ ಭಾರತ! ಚಾಂಪಿಯನ್ಸ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಫೈನಲ್ ಪ್ರವೇಶ

ಆಸ್ಟ್ರೇಲಿಯಾ ವಿರುದ್ಧ ದುಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ. ಈ ಮೂಲಕ ಸತತ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ. ಒಟ್ಟಾರೆ ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ 5ನೇ ಫೈನಲ್ ಆಗಿದೆ.

ಆಸ್ಟ್ರೇಲಿಯಾ ನೀಡಿದ್ದ 265ರನ್ಗಳ ಗುರಿಯನ್ನ ಕೊಹ್ಲಿಯವರ (84) ಅರ್ಧಶತಕ ಹಾಗೂ ಶ್ರೇಯಸ್ ಅಯ್ಯರ್ (45) ಮತ್ತು ಕನ್ನಡಿಗ ಕೆಎಲ್ ರಾಹುಲ್ (ಅಜೇಯ 42) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ನಿರಾಯಾಸವಾಗಿ ತಲುಪಿತು.

265 ರನ್​ಗಳ ಗುರಿ ಬೆನ್ನಟ್ಟಿ ಟೀಮ್ ಇಂಡಿಯಾ ಪವರ್​ ಪ್ಲೇನಲ್ಲೇ ಶುಭ್​ಮನ್​ ಗಿಲ್ ​(8) ವಿಕೆಟ್ ಕಳೆದುಕೊಂಡಿತು. ಇನ್ನ ರೋಹಿತ್ ಶರ್ಮಾ ತಮ್ಮ ಹೊಡಿಬಡಿ ಆಟಕ್ಕೆ ಮುಂದಾಗಿ ಇಂದೇ ಐಸಿಸಿ ಟೂರ್ನಮೆಂಟ್​ಗೆ ಪದಾರ್ಪಣೆ ಮಾಡಿದ್ದ ಕೂಪರ್ ಕೊನೊಲಿ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಅವರು ಔಟ್​ ಆಗುವ ಮುನ್ನ 29 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 28 ರನ್​​ಗಳಿಸಿದರು.

91 ರನ್​​ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ

ಈ ಸಂದರ್ಭದಲ್ಲಿ ಒಂದಾದ ಅದ್ಭುತ ಫಾರ್ಮ್​ ನಲ್ಲಿರುವ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 3ನೇ ವಿಕೆಟ್​​ಗೆ 91 ರನ್​​ಗಳ ಜೊತೆಯಾಟ ನೀಡಿದರು. ಸುಲಭವಾಗಿ ಸ್ಟ್ರೈಕ್ ರೊಟೇಷನ್ ಮಾಡುವ ಮೂಲಕ ರನ್​ಗತಿ ಹೆಚ್ಚಿಸಿದರು. ಶ್ರೇಯಸ್​ ಅಯ್ಯರ್ 62 ಎಸೆತಗಳಲ್ಲಿ 3 ಬೌಂಡರಿ ಸಹಿತ 45 ರನ್​​ಗಳಿಸಿ ಜಂಪಾ ಬೌಲಿಂಗ್​​ನಲ್ಲಿ ಬೌಲ್ಡ್​ ಆದರು.

ಶತಕ ಮಿಸ್ ಮಾಡಿಕೊಂಡ ಕೊಹ್ಲಿ

ನಂತರ ಬಂದ ಅಕ್ಷರ್ ಪಟೇಲ್ 30 ಎಸೆತಗಳಲ್ಲಿ ತಲಾ ಒಂದು ಬೌಂಡರಿ, ಸಿಕ್ಸರ್ ಸಹಿತ 27 ರನ್​​ಗಳಿಸಿದರು. ಅವರು ಕೊಹ್ಲಿ 4ನೇ ವಿಕೆಟ್​ಗೆ 44 ರನ್​ ಸೇರಿಸಿದರು. ಶತಕದ ಹೊಸ್ತಿಲಲ್ಲಿದ್ದ ಕೊಹ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ 16 ರನ್​​ಗಳಿಂದ ಶತಕ ಮಿಸ್ ಮಾಡಿಕೊಂಡರು. 98 ಎಸೆತಗಳನ್ನೆದುರಿಸಿದ ಕೊಹ್ಲಿ5 ಬೌಂಡರಿ ಸಹಿತ 84 ರನ್​​ಗಳಿಸಿದರು.

ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 28 ರನ್​​ಗಳಿಸಿದರೆ, ಕನ್ನಡಿಗ ಕೆಎಲ್ ರಾಹುಲ್ 34 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್​ಗಳ ನೆರವಿನಿಂದ ಅಜೇಯ 42 ರನ್​​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಆಸ್ಟ್ರೇಲಿಯಾ ಪರ ನೇಥನ್ ಎಲ್ಲಿಸ್ 49ಕ್ಕೆ2, ಆಯಡಂ ಜಂಪಾ 60ಕ್ಕೆ2, ಬೆನ್ ದ್ವಾರ್ಶುಯಸ್ 39ಕ್ಕೆ1, ಕೊನೊಲಿ 37ಕ್ಕೆ 1 ವಿಕೆಟ್ ಪಡೆದರು.

ಆಸ್ಟ್ರೇಲಿಯಾ ಇನ್ನಿಂಗ್ಸ್ ಹೇಗಿತ್ತು?

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ 49. 3 ಓವರ್​​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 264 ರನ್​ಗಳಿಸಿತ್ತು. ನಾಯಕ ಸ್ಟೀವ್ ಸ್ಮಿತ್ 96 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 73 ರನ್​ ಸಿಡಿಸಿದರೆ, ಅಲೆಕ್ಸ್ ಕ್ಯಾರಿ 57 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 61 ರನ್​​ಗಳಿಸಿದರು. ಟ್ರಾವಿಸ್ ಹೆಡ್​ 39, ಮಾರ್ನಸ್ ಲಾಬುಶೇನ್ 29 ರನ್​ಗಳಿಸಿದ್ದರು.

ಭಾರತದ ಪರ ಮೊಹಮ್ಮದ್ ಶಮಿ 48ಕ್ಕೆ 3, ವರುಣ್ ಚಕ್ರವರ್ತಿ 49ಕ್ಕೆ 2, ರವೀಂದ್ರ ಜಡೇಜಾ 40ಕ್ಕೆ2 ವಿಕೆಟ್ ಪಡೆದು ಮಿಂಚಿದರು.

ಹ್ರಾಟ್ರಿಕ್ ಫೈನಲ್

ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಸತತ ಮೂರನೇ ಬಾರಿಗೆ ಹಾಗೂ ಒಟ್ಟಾರೆ 5ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಭಾರತ 2000ದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಸೋಲು ಕಂಡಿತ್ತು. ನಂತರ 2002ರಲ್ಲಿ ಶ್ರೀಲಂಕಾ ಜೊತೆಗೂಡಿ ಜಂಟಿ ಚಾಂಪಿಯನ್ ಆಗಿತ್ತು. ಮತ್ತೆ 2013ರಲ್ಲಿ ಫೈನಲ್​​ನಲ್ಲಿ ಫೈನಲ್ ಪ್ರವೇಶಿಸಿದ್ದ ಟೀಮ್ ಇಂಡಿಯಾ ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಆಗಿತ್ತು. ಮತ್ತೆ 2017ರಲ್ಲಿ ಆವೃತ್ತಿಯಲ್ಲಿ ಭಾರತ ತಂಡ 4ನೇ ಬಾರಿ ಫೈನಲ್​ ಪ್ರವೇಶಿಸಿತ್ತಾದರೂ ಪಾಕಿಸ್ತಾನದ ವಿರುದ್ಧ ಸೋಲು ಕಂಡು ರನ್ನರ್ ಅಪ್ ಆಗಿತ್ತು. ಇದೀಗ ದಾಖಲೆಯ 5ನೇ ಬಾರಿಗೆ ಫೈನಲ್​ಗೆ ಎಂಟ್ರಿಕೊಟ್ಟಿದೆ.

ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button