ಬಿಬಿಎಂಪಿಗೆ ಹಣಕೊಡದೇ ಬ್ರ್ಯಾಂಡ್ ಬೆಂಗಳೂರು ಎಂದರೆ ಪ್ರಯೋಜನವಿಲ್ಲ: ಸಂಸದ ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಆರಂಭವಾಗುವ ಮೊದಲೇ ರಾಜಕಾಲುವೆ ಸ್ವಚ್ಚಗೊಳಿಸುವ ಕೆಲಸ ಮಾಡಲು ಬಿಬಿಎಂಪಿಗೆ ಹಣ ನೀಡದೇ ಬ್ರ್ಯಾಂಡ್ ಬೆಂಗಳೂರು ಎಂದರೆ ಪ್ರಯೋಜನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾಗುತ್ತಿದೆ. ಈ ಬಗ್ಗೆ ಅನೇಕ ವರದಿಗಳು ಕೂಡ ಇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸುಮಾರು 800 ಕೋಟಿ ರೂ. ಖರ್ಚು ಮಾಡಿ ರಾಜಕಾಲುವೆ ಸರ್ವೇ ಮಾಡಿಸಿ ಕೆಲಸ ಪ್ರಾರಂಭ ಮಾಡಿದ್ದೇವೆ. ಆ ಕೆಲಸವನ್ನು ಈಗಿನ ಸರ್ಕಾರ ಸಮರ್ಪಕವಾಗಿ ಮಾಡುತ್ತಿಲ್ಲ. ಮಳೆ ಬಂದಾಗ ಓಡಾಡುವುದಕ್ಕಿಂತ, ಮಳೆ ಶುರುವಾಗುವ ಮೊದಲೇ ಕಾಲುವೆ ಸ್ವಚ್ಚ ಗೊಳಿಸುವ ಕೆಲಸ ಆಗಬೇಕು.
ತಗ್ಗು ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳು, ಲೇಔಟ್ ಗಳು, ಪಾರ್ಟ್ ಮೆಂಟ್ ಗಳನ್ನು ತೆಗೆಯುವ ಕೆಲಸ ಪ್ರಾರಂಭ ಆಗುತ್ತದೆ. ನಿಲ್ಲುತ್ತದೆ. ಬೆಂಗಳೂರಿನ ಉತ್ತರ ಭಾಗದಲ್ಲಿ ಯಲಹಂಕದಲ್ಲಿ ಕೆರೆಗಳು ತುಂಬಿ ತಗ್ಗು ಪ್ರದೇಶದಲ್ಲಿ ಜಲಾವೃತವಾಗುತ್ತದೆ. ಅದನ್ನು ತಪ್ಪಿಸಲು ಕಾಲುವೆಗಳ ನಿರ್ಮಾಣ ಮಾಡಬೇಕು. ಕೆರೆ ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಅದನ್ನು ತೆರವುಗೊಳಿಸುವ ಕಾರ್ಯ ಆಗಬೇಕು. ಅದೇ ರೀತಿ ದಕ್ಷಿಣದಲ್ಲಿ ಹೆಚ್ಚು ಸಮಸ್ಯೆ ಆಗುತ್ತಿದೆ. ತಗ್ಗು ಪ್ರದೇಶದ ಬಗ್ಗೆ ಗಮನ ಹರಿಸದೇ ಇದ್ದರೆ ಸಮಸ್ಯೆ ಆಗುತ್ತದೆ. ಈ ಕೆಲಸ ಮಾಡದೇ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಮಾತನಾಡಿದರೆ ಪ್ರಯೋಜನವಿಲ್ಲ. ನಾವು ಇದ್ದಾಗ ಅವರು ಟೀಕೆ ಮಾಡುತ್ತಿದ್ದರು. ಈಗ ಅವರು ಅಧಿಕಾರಕ್ಕೆ ಬಂದಿದ್ದಾರೆ. ಈಗಿನ ಸಚಿವರು ಟೀಕೆಯನ್ನೇ ಮಾಡಬಾರದು ಎಂದು ಹೇಳುತ್ತಾರೆ.
ಒಂದು ಸರ್ಕಾರ ತಾನೇ ತಿಳಿದು ಕೆಲಸ ಮಾಡಬೇಕು. ಇಲ್ಲದಿದ್ದರೆ ಪ್ರತಿಪಕ್ಷ ಹೇಳಿದಾಗಾದರೂ ಕೆಲಸ ಮಾಡಬೇಕು. ತಮ್ಮ ಇಮೇಕ್ ಗೆ ದಕ್ಕೆಯಾಗುತ್ತದೆ ಎಂದರೆ ಹೇಗೆ, ಜನರು ಈಗ ಅನುಭವಿಸುತ್ತಿದ್ದಾರೆ. ಅದನ್ನ ಮುಚ್ಚಿಡುವುದಲ್ಲ. ಅದಕ್ಕೆ ಪರಿಹಾರ ಕೊಡುವ ಕೆಲಸ ಮಾಡಬೇಕು. ಕೇವಲ ಪ್ರಚಾರದಿಂದ ಬೆಂಗಳೂರಿನ ಅಭಿವೃದ್ಧಿ ಆಗುವುದಿಲ್ಲ ಎಂದರು.
ರಾಜ್ಯ ಸರ್ಕಾರ ರಾಜಕಾಲುವೆ ದುರಸ್ಥಿಗೆ ಬಿಬಿಎಂಪಿಗೆ ಮೊದಲು ಹಣ ಕೊಡಬೇಕು. ಹಣ ಕೊಡದೇ ಏನೂ ಆಗಲ್ಲ. ಬಿಬಿಎಂಪಿಗೆ ಬರುವ ತೆರಿಗೆಯಿಂದ ಬರುವ ಹಣದಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸ ಮಾಡುತ್ತಿದ್ದಾರೆ. ಆದರೆ, ರಾಜಕಾಲುವೆ, ರಿಪೇರಿ, ರೈಲ್ವೆ, ಅಂಡರ್ ಬ್ರಿಡ್ಜ್, ಓವರ್ ಬ್ರಿಡ್ಜ್ ಮಾಡಲು ಸರ್ಕಾರ ಹಾಕಿಕೊಂಡಿರುವ ಯೋಜನೆಗಳಿಗೆ ಹಣ ಕೊಡುತ್ತಿಲ್ಲ. ಐಐಎಸ್ ಸಿ ನೀಡಿದ ವರದಿ ಆಧಾರದಲ್ಲಿ ಹಿಂದೆ ನಾವು ಬೆಂಗಳೂರಿನ ಸಮಗ್ರ ಅಭಿವೃದ್ದಿ ವಿಶ್ವ ಬ್ಯಾಂಕ್ ಗೆ ಸುಮಾರು 2000 ಕೋಟಿ ರೂ. ಹಣಕಾಸಿನ ನೆರವಿಗೆ ಮನವಿ ಮಾಡಿದ್ದೆವು. ಇವರು ವರ್ಲ್ಡ್ ಬ್ಯಾಂಕ್ ನಿಂದ ಹಣ ತಂದಾದರೂ ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ದಿ ಪಡಿಸಬೇಕು. ಇವರು ಹಣವನ್ನೂ ಕೊಡುತ್ತಿಲ್ಲ, ಕೆಲಸವನ್ನೂ ಮಾಡುತ್ತಿಲ್ಲ. ಇದರಿಂದ ಶಾಲಾ ಕಾಲೇಜು ಮಕ್ಕಳಿಗೆ, ದುಡಿಯುವ ವರ್ಗಕ್ಕೆ, ವಾಣಿಜ್ಯ ಸಂಸ್ಥೆಗಳಿಗೆ ಸಮಸ್ಯೆಯಾಗುತ್ತಿದೆ.
ಈ ಸರ್ಕಾರಕ್ಕೆ ಸಮಯ ಇಲ್ಲ. ಖುರ್ಚಿ ಉಳಿಸಿಕೊಳ್ಳಲು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರಿಗೆ ಕಾವೇರಿ 5 ನೇ ಹಂತದ ನೀರು ತರುವ ಯೋಜನೆ ಬಿಜೆಪಿ ಅವಧಿಯಲ್ಲಿ ಹೆಚ್ಚು ಕೆಲಸವಾಗಿದೆ. ಯಾರ ಕಾಲದಲ್ಲಿ ಎಷ್ಟು ಕೆಲಸ ಆಗಿದೆ ಎಂದು ರಾಜ್ಯ ಸರ್ಕಾರ ಬೆಂಗಳೂರಿನ ಜನತೆಗೆ ಮಾಹಿತಿ ನೀಡಬೇಕು. ಈ ಯೋಜನೆ ಜಾರಿ ವೇಳೆ, ಎಲೆಕ್ಟ್ರಿಕ್ ಕೇಬಲ್ ಸಮಸ್ಯೆ, ಏನು ಸಮಸ್ಯೆ ಇತ್ತು. ಯಾರ ಕಾಲದಲ್ಲಿ ಅವುಗಳಿಗೆ ಏನೇನು ಪರಿಹಾರ ಆಯಿತು ಎನ್ನುವುದನ್ನು ತಿಳಿಸಬೇಕು. ಅಲ್ಲದೇ ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್ ಗಳನ್ನು ಹೆಚ್ಚಿಸಿ, ನೀರನ್ನು ಶುದ್ದೀಕರಣ ಮಾಡಿ ಕಾಲುವೆಗಳಿಗೆ ಬಿಡಬೇಕು. ನೀರು ಶುದ್ದೀಕರಣ ಮಾಡದಿದ್ದರೆ ರೋಗ ರುಜಿನಗಳು ಹೆಚ್ಚಾಗುತ್ತವೆ ಎಂದು ಹೇಳಿದರು.
ಕೇವಲ ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿದರೆ ಸಾಲದು, ಪ್ರತಿ ಪಕ್ಷಗಳ ಸಲಹೆಗಳನ್ನು ತೆಗೆದುಕೊಂಡು ಎಲ್ಲರ ಸಹಕಾರ ಪಡೆದು ಕೆಲಸ ಮಾಡಬೇಕು. ಹಿಂದೆ ಅವರು ಪ್ರತಿಪಕ್ಷದಲ್ಲಿದ್ದಾಗ ಏನೇನು ಟೀಕೆ ಮಾಡಿದ್ದಾರೆ ಎಂದು ನೋಡಿಕೊಳ್ಳಲಿ ಎಂದು ಹೇಳಿದರು.
ಮೋಹಮ್ಮದ್ ಶಫಿ tv8kannada ಬೆಂಗಳೂರು