ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಿಕರಿಂದ ಪ್ರತಿಭಟನೆ

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗೂಡ್ಸ್ ವಾಹನ ಚಾಲಕರು ಮತ್ತು ಮಾಲೀಕರಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಪ್ರತಿಭಟನಾಕಾರರು ಜಮಾಯಿಸಿ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ರೈತ ಹಿತ ರಕ್ಷಣಾ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ್ ಮಾತನಾಡಿ, ತಾಲೂಕಿನ ಅಟ್ಟುಗುಳಿಪುರದಲ್ಲಿ ಗೂಡ್ಸ್ ವಾಹನ ಸವಾರರಿಗೆ ಟೋಲ್ ವಿಧಿಸುತ್ತಿರುವುದರಿಂದ ಗೂಡ್ಸ್ ವಾಹನ ಚಾಲಕರು ಮತ್ತು ಮಾಲೀಕರಿಗೆ ತುಂಬಾ ತೊಂದರೆಯಾಗುತ್ತಿದೆ. ಸರ್ಕಾರದ ಕಾನೂನಿನ ಅನ್ವಯ ಟೋಲ್ ವಿಧಿಸಲಿ ಆದರೆ ಸ್ಥಳೀಯರಿಗೆ ಟೋಲ್ ಫ್ರೀ ಮಾಡಬೇಕು ಎಂಬುದು ನಮ್ಮ ಪ್ರತಿಭಟನೆಯ ಉದ್ದೇಶವಾಗಿದೆ. ಸುತ್ತಮುತ್ತಲಿನ ಗ್ರಾಮಗಳಿಗೆ ಗೂಡ್ಸ್ ಸಾಗಿಸಲು ಕಡಿಮೆ ಬಾಡಿಗೆ ಹಣ ಪಡೆಯುತ್ತಾರೆ, ಆ ಹಣವನ್ನು ಟೋಲ್ ವಿರೋಧಿಸುವವರಿಗೆ ನೀಡಿದರೆ ಗೂಡ್ಸ್ ವಾಹನ ಸವಾರರ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸ್ಥಳೀಯರಿಗೆ ಟೋಲ್ ವಿಧಿಸುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಸ್ಥಳೀಯ ಗೂಡ್ಸ್ ವಾಹನ ಚಾಲಕರು ಮತ್ತು ಮಾಲೀಕರಿಗೆ ಟೋಲ್ ಫ್ರೀ ಮಾಡಬೇಕು ಇಲ್ಲವಾದಲ್ಲಿ ಈ ಬಗ್ಗೆ ಟೋಲ್ ವಿಧಿಸುವ ಸ್ಥಳದಲ್ಲಿಯೇ ಎಲ್ಲಾ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕೆಸ್ತೂರು ಮರಪ್ಪ, ಲೋಹಿತ್, ಮಹೇಶ್, ರವಿ, ಜಗದೀಶ್, ರಮೇಶ್, ರಮೀಸ್, ವಿನೋದ್, ಕುಮಾರ್, ಸಿದ್ದು, ಚಂದನ್, ಹರೀಶ್, ಮಧು ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ
