ಕ್ರೀಡೆ

ತವರು ನೆಲದಲ್ಲಿ ಇಂದಾದರೂ ಪಂದ್ಯ ಗೆಲ್ಲುತ್ತಾ.. ? ನಮ್ಮ ಆರ್ ಸಿ ಬಿ

ಬೆಂಗಳೂರು : ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯೊಂದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB vs RR) ತಂಡ ಇಂದು(ಗುರಯವಾರ) ನಡೆಯುವ ಐಪಿಎಲ್‌(IPL 2025) ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ಬ್ಯಾಟರ್‌ಗಳ ಸ್ವರ್ಗ ಎಂದೇ ಕರೆಯಲ್ಪಡುವ ಚಿನ್ನಸ್ವಾಮಿ ಕ್ರೀಡಾಂಗಣ(M Chinnaswamy Stadium)ದಲ್ಲಿ ರನ್‌ ಮಳೆ ಸುರಿಯುವ ನಿರೀಕ್ಷೆ ಇದೆ.

ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಹೀಗಾಗಿ ಪ್ರೇಕ್ಷಕರು ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ಕಳೆದ ಪಂಜಾಬ್‌ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಪಂದ್ಯವನ್ನು 14 ಓವರ್‌ಗೆ ಸೀಮಿತಗೊಳಿಸಿ ಆಡಲಾಗಿತ್ತು.

ಕೋಚ್ ದ್ರಾವಿಡ್ ಅವರ ಮಾರ್ಗದರ್ಶನ ರಾಜಸ್ಥಾನ್‌ಗೆ ಈ ಪಂದ್ಯದಲ್ಲಿ ಹೆಚ್ಚು ನೆರವಾಗಲಿದೆ. ಏಕೆಂದರೆ ತಾವು ಬಾಲ್ಯದಿಂದಲೂ ಆಡಿ ಬೆಳೆದ ಕ್ರೀಡಾಂಗಣವನ್ನು ದ್ರಾವಿಡ್ ಚೆನ್ನಾಗಿ ಬಲ್ಲರು. ಹೀಗಾಗಿ ಎದುರಾಳಿ ತಂಡಕ್ಕೆ ದ್ರಾವಿಡ್‌ ಭೀತಿಯೂ ಕಾಡಿದೆ ಎನ್ನಲಡ್ಡಿಯಿಲ್ಲ.

ಚೊಚ್ಚಲ ಪಂದ್ಯದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಭಾರೀ ಸಂಚಲನ ಮೂಡಿಸಿರುವ 14ರ ಪೋರ ವೈಭವ್‌ ಸೂರ್ಯವಂಶಿ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅದರಲ್ಲೂ ಬ್ಯಾಟಿಂಗ್‌ ಟ್ರ್ಯಾಕ್‌ ಚಿನ್ನಸ್ವಾಮಿಯಲ್ಲಿ ಅವರ ಅಬ್ಬರ ಹೇಗಿದ್ದೀತು ಎಂದು ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ತವರಿನಾಚೆ ಉತ್ತಮವಾಗಿ ಬ್ಯಾಟ್‌ ಬೀಸುವ ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ರಜತ್​ ಪಾಟೀದಾರ್​, ಜಿತೇಶ್​ ಶರ್ಮ ಇದೀಗ ತವರಿನಲ್ಲಿಯೂ ಉತ್ತಮ ಬ್ಯಾಟಿಂಗ್‌ ನಡೆಸುವ ವಿಶ್ವಾಸದಲ್ಲಿದ್ದಾರೆ. ಬುಧವಾರ ಕೊಹ್ಲಿ ನೆಟ್ಸ್‌ ಅಭ್ಯಾಸದಲ್ಲಿ ಅಬ್ಬರದ ಬ್ಯಾಟಿಂಗ್‌ ಅಭ್ಯಾಸ ಕೂಡ ನಡೆಸಿದ್ದರು.

ದೇಶೀಯ ಕ್ರಿಕೆಟಿಗರನ್ನು ನೆಚ್ಚಿಕೊಂಡಿರುವ ರಾಜಸ್ಥಾನ್‌ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದರೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಪಾರ್ಶ್ವ ಸ್ನಾಯು ಸೆಳೆತದಿಂದ ಬಳಲುತ್ತಿರುವ ಖಾಯಂ ನಾಯಕ ಸಂಜು ಸ್ಯಾಮ್ಸನ್‌ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ರಿಯಾಗ್‌ ಪರಾಗ್‌ ತಂಡವನ್ನು ಮುನ್ನಡೆಸಲಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ಮತ್ತು ಆರ್‌ಸಿಬಿ ಐಪಿಎಲ್‌ನಲ್ಲಿ ಇದುವರೆಗೆ 33 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಆರ್‌ಸಿಬಿ 16 ಪಂದ್ಯ ಗೆದ್ದಿದೆ. ರಾಜಸ್ಥಾನ್‌ 14 ಪಂದ್ಯ ಜಯಿಸಿದೆ. ಮೂರು ಪಂದ್ಯ ಫಲಿತಾಂಶ ಕಂಡಿಲ್ಲ. ಈ ದಾಖಲೆ ನೋಡುವಾಗ ಆರ್‌ಸಿಬಿ ಬಲಿಷ್ಠ ಎನ್ನಲಡ್ಡಿಯಿಲ್ಲ.

ವರದಿ : ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button