ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ: ಜನರ ಸಂತಸ

ಲಿಂಗಸೂಗೂರು: ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪಟ್ಟಣದ ವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು ತಾಲ್ಲೂಕಿನ ಜನರಿಗೆ ಸಂತಸ ತಂದಿದೆ.
ವಿಭಾಗೀಯ ಆಸ್ಪತ್ರೆಯು ಸದ್ಯ 100 ಹಾಸಿಗೆ ಸಾಮರ್ಥ್ಯ ಹೊಂದಿದೆ. ಲಿಂಗಸುಗೂರು ತಾಲ್ಲೂಕು ಅಲ್ಲದೇ ಹುಣಸಗಿ, ಸುರುಪುರ ಸುತ್ತಮುತ್ತಲಿನ ಗ್ರಾಮಗಳ ಜನರು ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗೆ ಬರುತ್ತಿದ್ದರಿಂದ ಕೆಲ ವರ್ಷಗಳ ಹಿಂದೆ 200 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ಸಲ್ಲಿಸಲಾಗಿತ್ತು.
ಅದಕ್ಕೆ ಪೂರಕವಾಗಿ 2024ರ ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಈಗ ಈ ಸಾಲಿನ ಬಜೆಟ್‌ನಲ್ಲಿ ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಜಿಲ್ಲಾ ಆಸ್ಪತ್ರೆಯಾದರೆ ವೈದ್ಯರ ಸಂಖ್ಯೆ, ಸಿಬ್ಬಂದಿಗಳ ಸಂಖ್ಯೆಯೂ ಹೆಚ್ಚಾಗಲಿದೆ. 200 ಹಾಸಿಗೆಯ ಆಸ್ಪತ್ರೆಯಾಗಲಿದ್ದು, ಇದಕ್ಕಾಗಿ ವಿಶೇಷ ಸೌಲಭ್ಯಗಳು ದೊರೆಯಲಿದೆ. ಪಟ್ಟಣದಲ್ಲಿ ಈಗಾಗಲೇ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ನಿರ್ಮಾಣ ಹಂತದಲ್ಲಿದೆ.
ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದರಿಂದ ಆಸ್ಪತ್ರೆಗಾಗಿ 8 ಎಂಟು ಎಕರೆ ಜಾಗದ ಅವಶ್ಯಕತೆ ಇದ್ದು, ಇದಕ್ಕಾಗಿ ಅಧಿಕಾರಿಗಳ ಸಭೆ ನಡೆಸಿ ಶೀಘ್ರವೇ ಜಾಗ ಗುರುತಿಸುವಂತೆ ಉಪವಿಭಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಅವರಿಗೆ ಸೂಚಿಸಲಾಗಿದೆ.
‘ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು ಖುಷಿ ತಂದಿದೆ. ಇದರಿಂದ ಹಲವು ಸೌಲಭ್ಯಗಳು ಒದಗಿ ಬರಲಿದೆ’ ಎಂದು ಉಪ ವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ ಪ್ರತಿಕ್ರಿಯಿಸಿದರು.
ವರದಿ: ಮುಸ್ತಾಫಾ tv8kannada ಲಿಂಗಸುಗೂರು