Chhaava Collection Day 12: ಬಾಕ್ಸ್ ಆಫೀಸ್‌ನಲ್ಲಿ ನಿಲ್ಲದ ಛಾವಾ ಕಲೆಕ್ಷನ್ ಓಟ; ಈ ವರೆಗೂ ಈ ಚಿತ್ರ ಗಳಿಸಿದ್ದೆಷ್ಟು?

Chhaava Collection Day 12: ಬಾಲಿವುಡ್ ನಟ ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ಅವರ ಛಾವಾ ಸಿನಿಮಾ ಬಿಡುಗಡೆಯಾಗಿ 12 ದಿನಗಳು ಕಳೆದಿವೆ. ಈ 12 ದಿನಗಳ ಅವಧಿಯಲ್ಲಿ ಕಲೆಕ್ಷನ್ ವಿಚಾರದಲ್ಲಿ ಬಂಪರ್ ಗಳಿಕೆಯನ್ನು ಕಂಡಿದೆ ಈ ಐತಿಹಾಸಿಕ ಸಿನಿಮಾ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಒಳ್ಳೆಯ ಗಳಿಕೆ ಮುಂದುವರಿಸಿದೆ.
ಹಾಗಾದರೆ, 12 ದಿನಗಳ ಒಟ್ಟಾರೆ ಗಳಿಕೆ ಎಷ್ಟು? ವಿದೇಶದಿಂದ ಈ ಚಿತ್ರಕ್ಕೆ ಹರಿದುಬಂದ ಮೊತ್ತ ಎಷ್ಟು? ಇಲ್ಲಿದೆ ವಿವರ.
ಛತ್ರಪತಿ ಶಿವಾಜಿ ಮಹಾರಾಜ್ ಅವರ ಮಗ ಸಂಭಾಜಿ ಮಹಾರಾಜನ ಸಾಹಸದ ಜೀವನ ಆಧರಿಸಿದ ಕಥೆಯೇ ಈ ಛಾವಾ. ಮರಾಠಿ ಲೇಖಕ ಶಿವಾಜಿ ಸಾವಂತ್ ಬರೆದ ಛಾವಾ (ಸಿಂಹದ ಮರಿ) ಹೆಸರಿನ ಪುಸ್ತಕ ಆಧರಿಸಿ, ಅದೇ ಹೆಸರಿನಲ್ಲಿ ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಲಕ್ಷ್ಮಣ್ ಉಟೇಕರ್. ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದರೆ, ರಶ್ಮಿಕಾ ಮಂದಣ್ಣ ಯೇಸುಬಾಯಿ ಪಾತ್ರದಲ್ಲಿ ಎದುರಾಗಿದ್ದಾರೆ. ಇನ್ನುಳಿದಂತೆ, ಅಕ್ಷಯ್ ಖನ್ನಾ, ದಿವ್ಯಾ ದತ್ತ, ಅಶುತೋಷ್ ರಾಣಾ ಮಿಂಚಿದ್ದಾರೆ. ಇದೀಗ ಇದೇ ಸಿನಿಮಾ ಗಳಿಕೆಯ ನಾಗಾಲೋಟ ಮುಂದುವರಿಸಿದೆ.
ಈ ವರೆಗಿನ ಒಟ್ಟಾರೆ ಕಲೆಕ್ಷನ್ ಎಷ್ಟು?
ಛತ್ರಪತಿ ಸಂಭಾಜಿ ಜೀವನ ಆಧರಿಸಿದ ಛಾವಾ ಚಿತ್ರವು ಮಂಗಳವಾರಕ್ಕೆ (ಫೆ. 25) ದೇಶಾದ್ಯಂತ 363 ಕೋಟಿ ರೂ. ಗಡಿ ದಾಟಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಚಿತ್ರವು 12 ನೇ ದಿನ 18 ಕೋಟಿ ರೂ. ಗಳಿಸಿದೆ. ಇಲ್ಲಿಯವರೆಗೆ ಒಟ್ಟು 363.25 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ವಿದೇಶದ ಲೆಕ್ಕಾಚಾರವನ್ನು ಹೇಳುವುದಾದರೆ, ಮಂಗಳವಾರ ಬಿಡುಗಡೆಯಾದ 12ನೇ ದಿನದ ಅಂತ್ಯದ ವೇಳೆಗೆ, ಛಾವಾ ವಿಶ್ವದಾದ್ಯಂತ ಒಟ್ಟು 483.35 ಕೋಟಿ ಗಳಿಸಿದೆ. ಈ ಮೂಲಕ ಈ ವರ್ಷದ ಬಾಲಿವುಡ್‌ನ ಬೇರಾವ ಸಿನಿಮಾ ಮಾಡಿದ ದಾಖಲೆ ಈ ಸಿನಿಮಾ ಪಾಲಾಗಿದೆ.
130 ಕೋಟಿ ಬಜೆಟ್
ಸುಮಾರು 130 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಛಾವಾ ಸಿನಿಮಾ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಛತ್ರಪತಿ ಶಿವಾಜಿ ಮಹಾರಾಜರ ಮರಣದ ನಂತರದ ಕಥೆಯಾಗಿದೆ. ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಔರಂಗಜೇಬನಿಗೆ, ಶಿವಾಜಿಯ ಮರಣದ ನಂತರ, ದಕ್ಷಿಣದಲ್ಲಿ ತನ್ನನ್ನು ಸೋಲಿಸುವವರು ಯಾರೂ ಇಲ್ಲ ಎಂದು ಬೀಗುತ್ತಿದ್ದಾಗ, ಆಗ ಎದುರಾದವನೇ ಛತ್ರಪತಿ ಶಿವಾಜಿಯ ಮಗ ಸಂಭಾಜಿ ಮಹಾರಾಜ.
ಇನ್ನು ಈ ಚಿತ್ರದಲ್ಲಿ ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ದಿವ್ಯಾ ದತ್ತ, ವಿನೀತ್ ಕುಮಾರ್ ಸಿಂಗ್, ಸಂತೋಷ್ ಜುವೇಕರ್, ಅಲೋಕ್‌ನಾಥ್ ಮತ್ತು ಕಿರಣ್ ಕಮರ್ಕರ್ ಪಾತ್ರವರ್ಗದಲ್ಲಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ಸೌರಭ್ ಗೋಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
https://x.com/MaddockFilms/status/1894018888071037019?ref_src=twsrc%5Etfw%7Ctwcamp%5Etweetembed%7Ctwterm%5E1894018888071037019%7Ctwgr%5E345b14111013dcbea36db728fa95068bcf55fc97%7Ctwcon%5Es1_c10&ref_url=https%3A%2F%2Fapi-news.dailyhunt.in%2F