Virat Kohli: ಪಾಕಿಸ್ತಾನ ವಿರುದ್ಧ ಇತಿಹಾಸ ನಿರ್ಮಿಸಲಿರುವ ವಿರಾಟ್ ಕೊಹ್ಲಿ

ಟೀಂಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಬಾಂಗ್ಲಾದೇಶ ವಿರುದ್ಧ “ಎ” ಗುಂಪಿನ ಪಂದ್ಯದಲ್ಲಿ 6 ವಿಕೆಟ್ ಜಯ ದಾಖಲಿಸಿದೆ. ಟೀಮ್ ಇಂಡಿಯಾದ ಈ ಜಯದಲ್ಲಿ ಯುವ ಆಟಗಾರ ಶುಭಮನ್ ಗಿಲ್ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಉತ್ತಮ ಲಯದಲ್ಲಿ ಕಂಡು ಬಂದಿದ್ದ ವಿರಾಟ್ ಕೊಹ್ಲಿ, ಚಿಕ್ಕ ಇನಿಂಗ್ಸ್ಗೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಆದರೆ ಭಾನುವಾರ ಇವರ ಮೇಲೆ ಕೋಟ್ಯಾಂತರ ಅಭಿಮಾನಿಗಳ ಕಣ್ಣು ನೆಟ್ಟಿರಲಿವೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುತ್ತಲೇ ನಿರೀಕ್ಷೆಗಳ ದೊಡ್ಡ ಮೂಟೆಯನ್ನು ತಮ್ಮ ಬೆನ್ನ ಹಿಂದೆ ಕಟ್ಟಿಕೊಂಡು ಇಳಿಯುತ್ತಾರೆ.ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ವೀರಾವೇಶದ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ. ಈ ಪಂದ್ಯದಲ್ಲಿ ಪಾಕ್ ತಂಡದ ಸ್ಟಾರ್ ಬೌಲರ್ಗಳ ಹೆಡೆ ಮುರಿ ಕಟ್ಟಲು, ವಿರಾಟ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ದೊಡ್ಡ ದಾಖಲೆಯನ್ನು ನಿರ್ಮಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ.
ಯಾವ ದಾಖಲೆ ನಿರ್ಮಿಸಲಿದ್ದಾರೆ ಕೊಹ್ಲಿ?
ವಿರಾಟ್ ಕೊಹ್ಲಿ ಭಾನುವಾರ, ತಮ್ಮ ಏಕದಿನ ಕ್ರಿಕೆಟ್ ಜೀವನದ 299 ಪಂದ್ಯವನ್ನು ಆಡಲಿದ್ದಾರೆ. ಅದು ಸಹ ಅವರ ನೆಚ್ಚಿನ ಎದುರಾಳಿಯ ವಿರುದ್ಧ. ಈ ಪಂದ್ಯದಲ್ಲಿ ಕೊಹ್ಲಿ ಬರಿ 15 ರನ್ ಬಾರಿಸಿದರೂ ಸಹ ದೊಡ್ಡ ವಿಶ್ವ ದಾಖಲೆಯನ್ನು ನಿರ್ಮಿಸಲಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಸಾಧನೆಯನ್ನು ಮಾಡಿದ್ದೇ ಆದಲ್ಲಿ ವಿರಾಟ್, ವಿಶ್ವ ಏಕದಿನ ಕ್ರಿಕೆಟ್ನಲ್ಲಿ 14 ಸಾವಿರ ರನ್ಗಳನ್ನು ವೇಗವಾಗಿ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 14 ಸಾವಿರ ರನ್ಗಳನ್ನು ಇಬ್ಬರು ಆಟಗಾರರು ಮಾತ್ರ ಬಾರಿಸಿದ್ದಾರೆ. ಇದರಲ್ಲಿ ಒಬ್ಬರು ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಹಾಗೂ ಶ್ರೀಲಂಕಾ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರ. ಈ ಎಲೈಟ್ ಲೀಸ್ಟ್ಗೆ ಸೇರಲು ವಿರಾಟ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ವಿರಾಟ್ ಸಾಧನೆ
ವಿರಾಟ್ ಕೊಹ್ಲಿ 298 ಏಕದಿನ ಪಂದ್ಯಗಳ 286ನೇ ಇನಿಂಗ್ಸ್ನಲ್ಲಿ 57.78ರ ಸರಾಸರಿಯಲ್ಲಿ 13985 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 50 ಶತಕ ಹಾಗೂ 73 ಅರ್ಧಶತಕಗಳು ಸೇರಿವೆ. ಹಾಲಿ ಆಟಗಾರರಲ್ಲಿ ಈ ಸಂಖ್ಯೆಯ ಅಕ್ಕ ಪಕ್ಕದಲ್ಲಿಯೂ ಯಾವುದೇ ಆಟಗಾರನಿಲ್ಲ.
ಫಾರ್ಮ್ ಪರದಾಟ
ವಿರಾಟ್ ಕೊಹ್ಲಿ ಸದ್ಯ ಫಾರ್ಮ್ ಇಲ್ಲದೆ ಪರದಾಟ ನಡೆಸಿದ್ದಾರೆ. ಇವರು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಮೈದಾನಕ್ಕೆ ಇಳಿದಿರಲಿಲ್ಲ. ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಆದರೆ ಅಹಮದಾಬಾದ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಲಯ ಕಂಡು ಕೊಂಡಿರುವುದಾಗಿ ಎಚ್ಚರಿಕೆ ನೀಡಿದರು. ಆದರೆ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಆದರೆ ಪಾಕ್ ವಿರುದ್ದದ ಪಂದ್ಯದಲ್ಲಿ ವಿರಾಟ್ ತಮ್ಮ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಲು ಸಜ್ಜಾಗಿದ್ದಾರೆ.