ಹಾಸನ: ಸುಟ್ಟರೆ ಬೂದಿ ಆಗುತ್ತೇನೆ.ಮಣ್ಣಲ್ಲಿ ಹೂತರೆ ದೇಹ ಕೊಳೆತು ಹೋಗುತ್ತದೆ. ಹಾಗಾಗಿ ನನ್ನ ಅಂಗಾಂಗಗಳನ್ನು ದಾನ ಮಾಡಿ ಎಂದು ವಿಡಿಯೋ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ (Engineering Student) ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ(Hassan)ದಲ್ಲಿ ನಡೆದಿದೆ. ಸಂದೇಶ್ ಆತ್ಮಹತ್ಯೆಗೆ ಶರಣಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿ. ಇಂದಿನ ಶಿಕ್ಷಣ ವ್ಯವಸ್ಥೆ ಇದ್ರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಕುಲಪತಿಗಳು, ಎಲ್ಲ ಪಕ್ಷದ ಗಣ್ಯರು ಈ ವ್ಯವಸ್ಥೆ ಬದಲಾವಣೆಗೆ ಬೆಂಬಲ ಕೊಡಬೇಕೆಂದು ಸಂದೇಶ್ ಮನವಿ ಮಾಡಿಕೊಂಡಿದ್ದಾನೆ. ವಿಡಿಯೋ (Video) ತುಂಬೆಲ್ಲ ಶಿಕ್ಷಣ ವ್ಯವಸ್ಥೆ (Education System) ಸುಧಾರಣೆ ಆಗಬೇಕೆಂದು ಯುವಕ ಆತ್ಮಹತ್ಯೆಗೆ ಮುನ್ನ ಒತ್ತಾಯಿಸಿದ್ದಾನೆ. ಸೂಸೈಡ್ ಮುನ್ನ ವಿಡಿಯೋವನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾನೆ.

ಸಂದೇಶ್ ವಿಡಿಯೋದಲ್ಲಿ ಹೇಳಿದ್ದೇನು?
ವಿಡಿಯೋದಲ್ಲಿ ಸ್ನೇಹಿತೆಯ ನೀಟ್ ಪರೀಕ್ಷಗೆ ಒಳ್ಳೆಯದಾಗಲಿ. ನಿನ್ನ ಗುರಿಗಳು ಎಲ್ಲವೂ ಸಾಕಾರವಾಗಲಿ ಎಂದು ಹಾರೈಸುತ್ತೇನೆ. ನಾನು ನಿನ್ನನ್ನು ಕೇವಲ ಸ್ನೇಹಿತೆಯಾಗಿ ನೋಡಿಲ್ಲ. ನಿನ್ನನ್ನು ಕುಟುಂಬದ ಸದಸ್ಯೆಯಂತೆ ನೋಡಿಕೊಂಡಿದ್ದೇನೆ. ಮುಂದೆ ನನ್ನ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿನ್ನ ಮೇಲಿದೆ. ನಿನ್ನ ಅಪ್ಪ-ಅಮ್ಮನ ರೀತಿಯಲ್ಲಿ ನೋಡಿಕೊಳ್ಳುತ್ತೀಯಾ ಎಂದು ತಿಳಿದುಕೊಳ್ಳುತ್ತೇನೆ. ನನ್ನ ಅಂತ್ಯಕ್ರಿಯೆ ಬಳಿಕ ಅಪ್ಪ-ಅಮ್ಮ ನೀವೂ ಧೈರ್ಯ ಕಳೆದುಕೊಳ್ಳದೇ ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು.
ಒಂದೆರಡು ಅನಾಥ ಮಕ್ಕಳನ್ನು ತಂದು ಮನೆಯಲ್ಲಿ ಸಾಕಿ. ಆ ಮಕ್ಕಳಲ್ಲಿ ನಾನು ಜೀವಂತವಾಗಿರುತ್ತೇನೆ. ಬದುಕಿದ್ದ ವ್ಯಕ್ತಿ ಸತ್ತರೆ ಯಾರೂ ನೆನಪು ಮಾಡಿಕೊಳ್ಳಲ್ಲ. ಬದಲಾವಣೆ ತಂದೆ ಮಾತ್ರ ಸಮಾಜ ಆತನನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ನಿಮ್ಮ ಕನಸನ್ನು ನಾನು ಈಡೇರಿಸಲು ಆಗುತ್ತಿಲ್ಲ ಎಂಬುದನ್ನು ಈ ವಿಡಿಯೋ ಮೂಲಕ ನನ್ನ ಅಭಿಪ್ರಾಯ ಹೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ.