IND vs NZ Mumbai Test | ಜಡೇಜ ಬೆಂಕಿ ಬೌಲಿಂಗ್ 235ಕ್ಕೆ ನ್ಯೂಜಿಲೆಂಡ್ ಆಲೌಟ್

ಮುಂಬೈ: ರವೀಂದ್ರ ಜಡೇಜ (65ಕ್ಕೆ 5) ಹಾಗೂ ವಾಷಿಂಗ್ಟನ್ ಸುಂದರ್ (81ಕ್ಕೆ 4) ಸ್ಪಿನ್ ದಾಳಿಗೆ ಕುಸಿದಿರುವ ನ್ಯೂಜಿಲೆಂಡ್, ಇಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ 65.4 ಓವರ್‌ಗಳಲ್ಲಿ 235 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಆರಂಭದಲ್ಲೇ ಡೆವೊನ್ ಕಾನ್ವೆ ಅವರ ವಿಕೆಟ್ ಪಡೆದ ಆಕಾಶ್ ದೀಪ್, ಎದುರಾಳಿ ತಂಡಕ್ಕೆ ಮೊದಲ ಆಘಾತ ನೀಡಿದರು.
ಉತ್ತಮವಾಗಿ ಆಡುತ್ತಿದ್ದ ನಾಯಕ ಟಾಮ್ ಲೇಥಮ್ (28) ಹಾಗೂ ರಚಿನ್ ರವೀಂದ್ರ (5) ಅವರನ್ನು ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕ್ಲೀನ್ ಬೌಲ್ಡ್ ಮಾಡಿದರು.
ಮತ್ತೊಂದೆಡೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ವಿಲ್ ಯಂಗ್ ಅರ್ಧಶತಕದ ಸಾಧನೆ ಮಾಡಿದರು. ಅವರಿಗೆ ಡೆರಿಲ್ ಮಿಚೆಲ್ ಉತ್ತಮ ಸಾಥ್ ನೀಡಿದರು. ಅವರಿಬ್ಬರು ನಾಲ್ಕನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.
ಈ ವೇಳೆ ದಾಳಿಗಿಳಿದ ರವೀಂದ್ರ ಜಡೇಜ ಬೆನ್ನು ಬೆನ್ನಿಗೆ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಕಿವೀಸ್‌ಗೆ ಬಲವಾದ ಪೆಟ್ಟು ಕೊಟ್ಟರು.
ವಿಲ್ ಯಂಗ್ 138 ಎಸೆತಗಳಲ್ಲಿ 71 ರನ್ (4 ಬೌಂಡರಿ, 2 ಸಿಕ್ಸರ್) ಗಳಿಸಿ ಔಟ್ ಆದರು. ಟಾಮ್ ಬ್ಲಂಡೆಲ್ ಖಾತೆ ತೆರೆಯುವಲ್ಲಿ ವಿಫಲರಾದರು. ಗ್ಲೆನ್ ಫಿಲಿಪ್ಸ್ 17 ರನ್ ಗಳಿಸಿ ನಿರ್ಗಮಿಸಿದರು.
ಇನ್ನೊಂದೆಡೆ ದಿಟ್ಟ ಹೋರಾಟ ಪ್ರದರ್ಶಿಸಿದ ಡೆರಿಲ್ ಮಿಚೆಲ್ 82 ರನ್ ಗಳಿಸಿದರು. 129 ಎಸೆತಗಳನ್ನು ಎದುರಿಸಿದ ಮಿಚೆಲ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ಗಳಿಸಿ ಅಬ್ಬರಿಸಿದರು.
ಅಂತಿಮವಾಗಿ ನ್ಯೂಜಿಲೆಂಡ್ 235 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ರವೀಂದ್ರ ಜಡೇಜ ಐದು (65ಕ್ಕೆ 5) ಮತ್ತು ವಾಷಿಂಗ್ಟನ್ ಸುಂದರ್ ನಾಲ್ಕು (81ಕ್ಕೆ 4) ವಿಕೆಟ್ ಗಳಿಸಿ ಮಿಂಚಿದರು.
ಈ ಪೈಕಿ ರವೀಂದ್ರ ಜಡೇಜ ಟೆಸ್ಟ್ ಕ್ರಿಕೆಟ್‌ನಲ್ಲಿ 14ನೇ ಸಲ ಐದು ವಿಕೆಟ್‌ಗಳ ಗೊಂಚಲು ಪಡೆದರು.
ಇನ್ನುಳಿದಂತೆ ಈಶ್ ಸೋಧಿ 7, ಮ್ಯಾಟ್ ಹೆನ್ರಿ 0, ಎಜಾಜ್ ಪಟೇಲ್ 7 ರನ್ ಗಳಿಸಿ ಔಟ್ ಆದರು.