ಲಿಂಗಸುಗೂರು: ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಲಾಡ್ಜ್ ಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಲಿಂಗಸುಗೂರು: ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಲಾಡ್ಜ್, ಆಸ್ಪತ್ರೆ, ಶಾಪಿಂಗ್ ಮಾಲ್ ಗಳ ವಿರುದ್ಧ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.
ಪ್ರತಿನಿತ್ಯ ಸಾವಿರಾರು ವಾಹನಗಳು ಹೆದ್ದಾರಿ ಸೇರಿ ಸರ್ವಿಸ್ ರಸ್ತೆಯಲ್ಲಿ ಓಡಾಡುತ್ತವೆ. ಬೆಂಗಳೂರು ಬೈಪಾಸ್ ರಸ್ತೆ, ಕಲುಬುರಗಿ ರಸ್ತೆ, ಸೇರಿದಂತೆ ಇತರೆಡೆಯಲ್ಲಿರುವ ಬೃಹತ್ ಶಾಪಿಂಗ್ ಮಾಲ್ ಗಳು, ಬ್ಯಾಂಕ್, ಆಸ್ಪತ್ರೆಗಳು, ವಿವಿಧ ವಾಣಿಜ್ಯ ಮಳಿಗೆಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಬೈಕ್, ಕಾರು ನಿಲುಗಡೆ ಮಾಡುತ್ತಿದ್ದರಿಂದ ಪಾದಚಾರಿಗಳು ತಿರುಗಾಡಲು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಆಂಬುಲೆನ್ಸ್ ವಾಹನ ಹೋಗಲು ಸಾಧ್ಯವಾಗದ ರೀತಿಯಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಜರಗಿಸಿ ಸಮಸ್ಯೆ ಪರಿಹರಿಸಬೇಕು ಎಂದು ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ನಮ್ಮ ಕರ್ನಾಟಕ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ನಾಯ್ಕ, ನಿರುಪಾದಿ ಹಿರೇಮಠ, ಚಂದ್ರು ನಾಯಕ, ಬಸವರಾಜ ನಾಯಕ, ವೆಂಕಟೇಶ ಗುಡದನಾಳ, ಕಿರಣ ನಾಯಕ, ಚಂದ್ರಕಾಂತ ಭೋವಿ, ಶಿವರಾಜ ಅಲಬನೂರು, ಮಹಾಂತಯ್ಯ ಉಪಸ್ಥಿತರಿದ್ದರು.
ವರದಿ: ಮುಸ್ತಾಫಾ tv8kannada ಲಿಂಗಸುಗೂರು