ವಿರಾಟ್ ಕೊಹ್ಲಿ 82ನೇ ಅಂತಾರಾಷ್ಟ್ರೀಯ ಸೆಂಚುರಿ; ಇತಿಹಾಸದ ಪುಸ್ತಕಕ್ಕೆ ಮತ್ತೊಂದಿಷ್ಟು ದಾಖಲೆಗಳು ಸೇರ್ಪಡೆ

ಟೀಂ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 51ನೇ ಏಕದಿನ ಶತಕ ಸಿಡಿಸಿ ಹಲವು ವಿಶ್ವದಾಖಲೆಗಳನ್ನು ಮುರಿದಿದ್ದಾರೆ. ಫೆ 23ರಂದು ಪಾಕಿಸ್ತಾನ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ತಾನು 35 ರನ್ ಗಳಿಸಿದ್ದಾಗ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 14,000 ರನ್ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ, ಐತಿಹಾಸಿಕ ಶತಕ ಸಿಡಿಸಿ ತನ್ನ ದಾಖಲೆಯ ಪುಸ್ತಕಕ್ಕೆ ಮತ್ತೊಂದಿಷ್ಟು ದಾಖಲೆಗಳನ್ನು ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿರಾಟ್ 111 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 100 ರನ್ ಸಿಡಿಸಿ ಪಾಕ್ ಅನ್ನು ಮಣಿಸುವಲ್ಲೂ ಪ್ರಮುಖ ಪಾತ್ರವಹಿಸಿದರು. ಸುಮಾರು 15 ತಿಂಗಳ ನಂತರ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.
51ನೇ ಏಕದಿನ ಶತಕ, 82ನೇ ಅಂ.ರಾ. ಶತಕ
ಪಾಕಿಸ್ತಾನ ವಿರುದ್ಧ ಸಿಡಿಸಿದ ಅವಿಸ್ಮರಣೀಯ ಶತಕವು ಕೊಹ್ಲಿ ಪಾಲಿಗೆ 51ನೇ ಏಕದಿನ ಶತಕ. 2023ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 50ನೇ ಒಡಿಐ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದ ಕಿಂಗ್, ಆ ಬಳಿಕ ಇದೇ ಮೊದಲ ಬಾರಿಗೆ ನೂರರ ಗಡಿ ದಾಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೊಹ್ಲಿಗಿದು 82ನೇ ಶತಕ. ಏಕದಿನದಲ್ಲಿ 51, ಟೆಸ್ಟ್ನಲ್ಲಿ 30, ಟಿ20ಐನಲ್ಲಿ 1 ಶತಕ ಸಿಡಿಸಿರುವ ರನ್ ಮೆಷಿನ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಪಟ್ಟಿಯಲ್ಲಿ ಸಚಿನ್ (100) ನಂತರದ ಸ್ಥಾನದಲ್ಲಿದ್ದಾರೆ.
ಅಂ. ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಸಕ್ರಿಯ ಆಟಗಾರರು
ವಿರಾಟ್ ಕೊಹ್ಲಿ – 82*
ಜೋ ರೂಟ್ – 52
ರೋಹಿತ್ ಶರ್ಮಾ – 49
ಸ್ಟೀವ್ ಸ್ಮಿತ್ – 48
ಕೇನ್ ವಿಲಿಯಮ್ಸನ್ – 47
ಐಸಿಸಿ ಟೂರ್ನಮೆಂಟ್ನಲ್ಲಿ ಅತಿ ಹೆಚ್ಚು ಶತಕ
2025ರ ಕ್ಯಾಲೆಂಡರ್ ವರ್ಷದಲ್ಲಿ ಮೊದಲ ಶತಕ ದಾಖಲಿಸಿರುವ ಕೊಹ್ಲಿ, ಪಾಕಿಸ್ತಾನ ವಿರುದ್ಧ ನಾಲ್ಕನೇ ಬಾರಿಗೆ ಮೂರಂಕಿ ದಾಟಿದ್ದಾರೆ. ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸೆಂಚುರಿ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಐಸಿಸಿ ಟೂರ್ನಮೆಂಟ್ಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಆಟಗಾರರ ಪಟ್ಟಿಯಲ್ಲೂ ಕೊಹ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಒಟ್ಟು 6 ಸೆಂಚುರಿ ಬಾರಿಸಿರುವ ವಿರಾಟ್, ಅಷ್ಟೇ ಶತಕ ಬಾರಿಸಿರುವ ಡೇವಿಡ್ ವಾರ್ನರ್, ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಸರಿಗಟ್ಟಿದ್ದಾರೆ.
ಭಾರತ ಪರ ಏಕದಿನಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪಡೆದವರು
ಸಚಿನ್ ತೆಂಡೂಲ್ಕರ್ – 62
ವಿರಾಟ್ ಕೊಹ್ಲಿ – 42*
ಸೌರವ್ ಗಂಗೂಲಿ – 31
ಯುವರಾಜ್ ಸಿಂಗ್ – 27
ರೋಹಿತ್ ಶರ್ಮಾ – 25
ಐಸಿಸಿ ಏಕದಿನ ಟೂರ್ನಿಗಳಲ್ಲಿ ಅತಿ ಹೆಚ್ಚು 50+ ಸ್ಕೋರ್
ವಿರಾಟ್ ಕೊಹ್ಲಿ – 23
ಸಚಿನ್ ತೆಂಡೂಲ್ಕರ್ – 23
ರೋಹಿತ್ ಶರ್ಮಾ – 18
ಕುಮಾರ್ ಸಂಗಕ್ಕಾರ – 17
ರಿಕಿ ಪಾಂಟಿಂಗ್ – 16
ವೇಗದ 14 ಸಾವಿರ ರನ್ ಪೂರೈಸಿದ ಕೊಹ್ಲಿ
ಕೊಹ್ಲಿ ಏಕದಿನದಲ್ಲಿ 14 ಸಾವಿರ ರನ್ಗಳನ್ನು ಪೂರ್ಣಗೊಳಿಸಿದ ಮೂರನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ಅವರು ಕೇವಲ 287 ಇನ್ನಿಂಗ್ಸ್ಗಳಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದರು. ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ 350 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ಶ್ರೀಲಂಕಾದ ಕುಮಾರ ಸಂಗಕ್ಕಾರ 378 ಇನ್ನಿಂಗ್ಸ್ಗಳಲ್ಲಿ 14,000 ರನ್ಗಳನ್ನು ಪೂರ್ಣಗೊಳಿಸಿದ್ದರು.
ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಫೀಲ್ಡರ್ ಆಗಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ 299 ಏಕದಿನ ಪಂದ್ಯಗಳಲ್ಲಿ 158 ಕ್ಯಾಚ್ ಪಡೆದಿದ್ದಾರೆ. ಒಟ್ಟಾರೆ ಪಟ್ಟಿಯಲ್ಲಿ ಅವರು 3ನೇ ಸ್ಥಾನ ಪಡೆದಿದ್ದು, ಮೊದಲ ಸ್ಥಾನದಲ್ಲಿ ಮಹೇಲಾ ಜಯವರ್ಧನೆ (218), ನಂತರ ರಿಕಿ ಪಾಂಟಿಂಗ್ (160) ಸ್ಥಾನ ಪಡೆದಿದ್ದಾರೆ.
ವರದಿ ಹಾಗು ಮಾಹಿತಿ ಸಂಗ್ರಹ : ಮೊಹಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು