58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಹೂರ್ತ ಫಿಕ್ಸ್..!
ಬೆಂಗಳೂರು,ನ.29- ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ, ಜಿಗಣಿ, ಚಂದಾಪುರ ಪುರಸಭೆ ಸೇರಿದಂತೆ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಡಿ.27ರಂದು ಮತದಾನ ನಡೆಯಲಿದೆ.
ವಿವಿಧ ಕಾರಣಗಳಿಂದ ತೆರವಾಗಿದ್ದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವೇಳಾಪಟ್ಟಿಯನ್ನು ಆಯೋಗ ಇಂದು ಪ್ರಕಟಿಸಿದೆ. ಐದು ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯ್ತಿಯ 1185 ವಾರ್ಡ್‍ಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ.ಸಂಬಂಧಪಟ್ಟ ಜಿಲ್ಲಾಕಾರಿಗಳು ಡಿ.8ರಂದು ಚುನಾವಣಾ ಅಸೂಚನೆಯನ್ನು ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಡಿ.15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿವಾಗಿದ್ದು, ಡಿ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಅವಕಾಶವಿದೆ.
ಡಿ.27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿದೆ. ಮರುಮತದಾನದ ಅಗತ್ಯಬಿದ್ದರೆ ಡಿ.29ರಂದು ನಡೆಸಲಾಗುತ್ತದೆ. ಮತಗಳ ಎಣಿಕೆಯು ಡಿ.31ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗುವ ಸಾದ್ಯತೆಗಳಿವೆ.
ಡಿ.8ರಿಂದಲೇ ನಗರ ಸ್ಥಳೀಯ ಸಂಸ್ಥೆಗಳು ನಡೆಯುವ ವ್ಯಾಪ್ತಿಯಲ್ಲಿ ಸದಾಚಾರ ಸಂಹಿತೆ ಜಾರಿಯಲ್ಲಿರುತ್ತದೆ. ಮಹಾನಗರ ಪಾಲಿಕೆಗೆ 3 ಲಕ್ಷ ರೂ. ನಗರಸಭೆಗೆ 2 ಲಕ್ಷರೂ. ಪುರಸಭೆಗೆ ಒಂದೂವರೆ ಲಕ್ಷ ರೂ. ಹಾಗೂ ಪಟ್ಟಣ ಪಂಚಾಯ್ತಿಗೆ ಒಂದು ಲಕ್ಷ ರೂ. ಚುನಾವಣಾ ವೆಚ್ಚದ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ.
ಮತದಾರರಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು, ಮತಪತ್ರಗಳಲ್ಲಿ ಅಭ್ಯರ್ಥಿಯ ಹೆಸರಿನ ಮುಂದೆ ಅವರ ಭಾವಚಿತ್ರವನ್ನು ಮುದ್ರಿಸಲಾಗುತ್ತದೆ.ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣೆಯ ಎಲ್ಲ ಹಂತದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆಯೋಗ ಸೂಚಿಸಿದೆ.
ಚಿಕ್ಕಮಗಳೂರು, ಶಿರಾ, ಗದಗ, ಬೆಟಗೇರಿ, ಹೊಸಪೇಟೆ, ನಗರಸಭೆಗಳಿಗೆ ಅಥಣಿ, ಅಣ್ಣಿಗೇರಿ, ಬಂಕಾಪುರ ಪುರಸಭೆಗಳಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಲಾಗಿದೆ.ಹೆಬ್ಬಗೋಡಿ ನಗರಸಭೆ, ಪುರಸಭೆಗಳಾದ ಜಿಗಣಿ, ಚಂದಾಪುರ, ಬಿಡದಿ, ಮಲೆಬೆನ್ನೂರು, ಕಾಪು, ಹಾರೋಗೇರಿ, ಮುಗಳಕೋಡ, ಮುನವಳ್ಳಿ, ಉಗಾರಕುರ್ದ, ಕಾರಟಗಿ, ಕುರೇಕುಪ್ಪ, ಕುರಗೋಡು, ಅಗರಿಬೊಮ್ಮನಹಳ್ಳಿ, ಮಸ್ಕಿ, ಕೆಂಬಾವಿ, ಕಕ್ಕೇರಗಳಿಗೆ ಚುನಾವಣೆ ಘೋಷಿಸಲಾಗಿದೆ.
ಪಟ್ಟಣ ಪಂಚಾಯ್ತಿಗಳಾದ ನಾಯಕನಹಟ್ಟಿ, ವಿಟ್ಲ, ಕೋಟೆಕಾರು, ಎಂ.ಕೆ.ಹುಬ್ಬಳ್ಳಿ, ಕಂಕನವಾಡಿ, ನಾಗನೂರ, ಯಕ್ಸಾಂಬ, ಚನ್ನಮ್ಮನ ಕಿತ್ತೂರು, ಅರೆಬಾವಿ, ಹೈನಾಪುರ, ಶೇಡಬಾಳ, ಚಿಂಚಿಲಿ, ಬೋರಗಾಂವ, ಕಲ್ಲೋಳ್ಳಿ, ನಲತವಾಡ, ನಿಡಗುಂದಿ, ದೇವರಹಿಪ್ಪರಗಿ, ಹಾಲಮೇಲ, ಮನಗೂಳಿ, ಕೋಲಾರ, ಕಮಟಗಿ, ಬೆಳಗಲಿಗಳಿಗೆ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಅಮಿನಘಡ, ಗುತ್ತಲ, ಜಾಲಿ, ತಾವರಗೇರಾ, ಕೂಕನೂರ, ಭಾಗ್ಯನಗರ, ಕನಕಗಿರಿ, ಮರಿಯಮ್ಮನಹಳ್ಳಿ, ಕವಿತಾಳ, ತುರುವಿಹಾಳ, ಬಳಗನೂರು, ಸಿರಾವಾರಪಟ್ಟಣ ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ.ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‍ಗಳಿಗೂ ಉಪಚುನಾವಣೆ ಘೋಷಣೆಯಾಗಿದೆ. ನಗರಸಭೆಗಳಾದ ಕೊಳ್ಳೆಗಾಲದ 6 ವಾರ್ಡ್‍ಗಳಿಗೆ, ಹರಿಹರದ 21, ದಾಂಡೇಲಿಯ 18, ಗೌರಿಬಿದನೂರಿನ 10 ವಾರ್ಡ್, ಜಮಖಂಡಿಯ 9 ವಾರ್ಡ್‍ಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ.
ಪುರಸಭೆಗಳಾದ ಮೂಡಲಗಿಯ 9, ಸೇಡಂನ 13, ಹಾನಗಲ್‍ನ 19 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದೆ. ಚಡಚಣ ಪಟ್ಟಣ ಪಂಚಾಯ್ತಿಯ 4 ವಾರ್ಡ್‍ಗಳಿಗೆ ಆಯೋಗ ಉಪಚುನಾವಣೆಯನ್ನು ಘೋಷಿಸಿದೆ.