30 ವರ್ಷಗಳ ಪ್ರೀತಿ, 65ರ ಇಳಿ ವಯಸ್ಸಿನಲ್ಲಿ ಮದುವೆ..!
ಮಂಡ್ಯ: ಅವರಿಬ್ಬರೂ ಪ್ರೇಮಿಗಳು.. ಅದು ಬರೋಬ್ಬರಿ 30 ವರ್ಷಗಳ ಸುದೀರ್ಘ ಪ್ರೇಮ ಕಥೆ..! ಯುವಕರಿದ್ದಾಗ ಶುರುವಾದ ಪ್ರೀತಿ, ಮುದುಕರಾದರೂ ಜೀವಂತವಾಗಿಯೇ ಇತ್ತು. ಆದ್ರೆ, ಇವರಿಬ್ಬರೂ ಮದುವೆಯನ್ನೇ ಆಗಿರಲಿಲ್ಲ..! 65ನೇ ವರ್ಷದ ಇಳಿ ವಯಸ್ಸಿನಲ್ಲಿ ಮದುವೆ ಆಗಲು ಹೊರಟ ಈ ಜೋಡಿಯನ್ನು ಕಂಡು ಎಲ್ಲರೂ ಅಚ್ಚರಿಪಟ್ಟರು..! ಈ ಘಟನೆ ನಡೆದಿರೋದು, ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ.
ಮೂಲತಃ ಮೈಸೂರು ಜಿಲ್ಲೆಯವರಾದ ಹೆಬ್ಬಾಳದ ಚಿಕ್ಕಣ್ಣ ಮತ್ತು ಜಯಮ್ಮ, ಕಳೆದ 30 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ, ಇವರಿಬ್ಬರಿಗೂ ಕಂಕಣ ಭಾಗ್ಯವೇ ಕೂಡಿ ಬಂದಿರಲಿಲ್ಲ. ಹತ್ತು ಹಲವು ಕೌಟುಂಬಿಕ ಕಾರಣಗಳಿಂದಾಗಿ ಇವರಿಬ್ಬರ ನಡುವೆ ಪ್ರೀತಿಯಿದ್ದರೂ ವಿವಾಹ ಬಂಧ ಏರ್ಪಟ್ಟಿರಲೇ ಇಲ್ಲ.
ಗುರುವಾರ ಡಿಸೆಂಬರ್ 2ರಂದು ಈ ಜೋಡಿಗೆ ವಿವಾಹ ಭಾಗ್ಯ ಸಿಕ್ಕ ಸುದಿನ. ಮಂಡ್ಯ ಜಿಲ್ಲೆ ಮೇಲುಕೋಟೆಯ ಚಲುವರಾಯಸ್ವಾಮಿ ದೇವಾಲಯದ ಮುಂಭಾಗ ಇರುವ ಶ್ರೀನಿವಾಸ್ ಗುರೂಜಿ ಅವರ ಆಶ್ರಮದಲ್ಲಿ ಈ ಅಪರೂಪದ ಜೋಡಿ ವಿವಾಹಕ್ಕೆ ಸಜ್ಜಾಗಿತ್ತು. 65 ವರ್ಷ ವಯಸ್ಸಿನ ಚಿಕ್ಕಣ್ಣ ಮತ್ತು ಜಯಮ್ಮ, ನವ ವಧು-ವರರಂತೆ ಹೊಸ ಬಟ್ಟೆ ಧರಿಸಿ ಹಣೆಗೆ ಬಾಸಿಂಗ ಧರಿಸಿ ಕಂಗೊಳಿಸಿದರು. ಮೈಸೂರು ಪೇಟ ತೊಟ್ಟ ಜಯಣ್ಣ, ತಮ್ಮ ಬಹುಕಾಲದ ಪ್ರೇಯಸಿ ಜಯಮ್ಮ ಅವರಿಗೆ ಶಾಸ್ತ್ರೋಕ್ತವಾಗಿ ಮಾಂಗಲ್ಯ ಧಾರಣೆ ಮಾಡಿ ಇಬ್ಬರೂ ಸತಿಪತಿಗಳಾದರು.