ದೇಶ

ನಾಳೆ ದೆಹಲಿ ಚುನಾವಣಾ ಫಲಿತಾಂಶ! ನಿಜವಾಗಲಿದ್ಯಾ ಎಕ್ಸಿಟ್ ಪೋಲ್ ಸಮೀಕ್ಷೆ? ಹೀಗಿದೆ ನೋಡಿ ಅಚ್ಚರಿ ವರದಿ | Delhi Election Results

Delhi Election Results: ಇದೇ ಫೆ.05ರಂದು ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ನಡೆದಿತ್ತು. ನಾಳೆ (ಫೆ.08) ಚುನಾವಣೆಯ ಅಧಿಕೃತ ಫಲಿತಾಂಶಗಳು ಹೊರಬೀಳಲಿದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಯಾರ ಪರ ಬರಲಿದೆ? ಯಾರ ಪಾಲಾಗಲಿದೆ ದೆಹಲಿಯ ಅಧಿಕಾರ ಎಂಬುದರ ಬಗ್ಗೆ ಸದ್ಯ ದೇಶಾದ್ಯಂತ ಭಾರೀ ಕುತೂಹಲ ಮೂಡಿದೆ.

ದೆಹಲಿ ಚುನಾವಣೆಯ ಫಲಿತಾಂಶಗಳು ನಾಳೆ ಅಧಿಕೃತವಾಗಿ ಪ್ರಕಟವಾಗಲಿದ್ದು, ಈಗಾಗಲೇ ಚುನಾವಣಾ ಆಯೋಗವು ಮತ ಎಣಿಕೆಗೆ ವ್ಯವಸ್ಥೆ ಮಾಡಿಕೊಂಡಿದೆ. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದೆ. ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡ ಅರ್ಧ ಗಂಟೆಯ ನಂತರ ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ ಎಂಬುದರ ಮಾಹಿತಿ ಪ್ರಕಟವಾಗಲಿದೆ.


ಫೆಬ್ರವರಿ 5ರಂದು ಒಂದೇ ಹಂತದಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆದಿದ್ದು, 70 ವಿಧಾನಸಭಾ ಸ್ಥಾನಗಳಿಗೆ 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಒಂದೆಡೆಯಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣಾ ಪ್ರಚಾರವನ್ನು ಬಿರುಸಿನಿಂದ ನಡೆಸಿ, ಅಖಾಡದಲ್ಲಿ ಭಾರೀ ಸದ್ದು ಮಾಡಿವೆ. ಫಲಿತಾಂಶಗಳ ಬಗ್ಗೆ ಮೂರು ಪಕ್ಷಗಳಲ್ಲಿ ವಿಶ್ವಾಸ ಮೂಡಿದ್ದು, ಗೆಲುವು ತಮ್ಮದೇ ಎಂದು ಹೇಳಿಕೊಂಡಿವೆ. ಈ ಮಧ್ಯೆ, ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸುವ ವಿಶ್ವಾಸದಲ್ಲಿ ಎಎಪಿ ಇದ್ದರೆ, ಈ ಬಾರಿ ನಮ್ಮದೇ ಅಧಿಕಾರಕ್ಕೆ ಬರಲಿದೆ ಎಂಬ ಬಲವಾದ ನಂಬಿಕೆಯಲ್ಲಿ ಬಿಜೆಪಿ ಇದೆ.ವಿಧಾನಸಭಾ ಚುನಾವಣಾ ಫಲಿತಾಂಶಕ್ಕಾಗಿ ಚುನಾವಣಾ ಆಯೋಗವು 19 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಮತಗಳ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ನಂತರ 8.30ಕ್ಕೆ ಇವಿಎಂ ಮತಗಳ ಎಣಿಕೆ ಶುರುವಾಗಲಿದೆ. 5,000 ಉದ್ಯೋಗಿಗಳು ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಎಣಿಕೆಗಾಗಿ ಚುನಾವಣಾ ಆಯೋಗವು ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಮ್ಯಾಜಿಕ್ ನಂಬರ್​

70 ವಿಧಾನಸಭಾ ಸ್ಥಾನಗಳಿಗೆ 699 ಅಭ್ಯರ್ಥಿಗಳು ಕಣದಲ್ಲಿದ್ದು, ಸರ್ಕಾರ ರಚನೆಗೆ ಮ್ಯಾಜಿಕ್ ಫಿಗರ್ 36 ಅಗತ್ಯವಿದೆ. ದೆಹಲಿಯಲ್ಲಿ ಶೇ. 60.54ರಷ್ಟು ಮತದಾನ ದಾಖಲಾಗಿದೆ. ಆದರೆ, ಅಧಿಕೃತ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಇತ್ತೀಚೆಗೆ ಪ್ರಕಟವಾದ ಎಕ್ಸಿಟ್ ಪೋಲ್ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಸದ್ಯ ಇದು ಬಿಜೆಪಿಗರಲ್ಲಿ ಭಾರೀ ಸಂತಸ ಉಂಟುಮಾಡಿದೆ.

ಪ್ರಮುಖ ಅಭ್ಯರ್ಥಿಗಳು ಇವರೇ

ನವದೆಹಲಿಯಿಂದ ಎಎಪಿಯ ಅರವಿಂದ್ ಕೇಜ್ರಿವಾಲ್, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಇಲ್ಲಿ ಸ್ಪರ್ಧಿಸಿದ್ದಾರೆ. ಕಲ್ಕಾಜಿ ಕ್ಷೇತ್ರದಿಂದ ಎಎಪಿ ಅಭ್ಯರ್ಥಿ ಹಾಗೂ ದೆಹಲಿ ಸಿಎಂ ಅತಿಶಿ, ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ್ ಬಿದುರಿ ಸ್ಪರ್ಧಿಸಿದ್ದಾರೆ. ಎಎಪಿಯಿಂದ ಮನೀಶ್ ಸಿಸೋಡಿಯಾ, ಬಿಜೆಪಿಯಿಂದ ತರವಿಂದರ್ ಸಿಂಗ್ ಮತ್ತು ಕಾಂಗ್ರೆಸ್‌ನಿಂದ ಸಿಂಗ್ ಮಾರ್ವಾ ಜಂಗ್‌ಪುರದಿಂದ ಸ್ಪರ್ಧಿಸಿದ್ದಾರೆ. ಹಿರಿಯ ಎಎಪಿ ನಾಯಕ ಸತ್ಯೇಂದ್ರ ಜೈನ್ ಮತ್ತು ಬಿಜೆಪಿ ಅಭ್ಯರ್ಥಿ ಕರ್ನೈಲ್ ಸಿಂಗ್ ಶಕುರ್ ಬಸ್ತಿಯಿಂದ ಸ್ಪರ್ಧಿಸಿದ್ದಾರೆ.

ಬಹುತೇಕ ಕಂಪನಿಗಳ ಸಮೀಕ್ಷೆ ಹೀಗಿದೆ

ಎಕ್ಸಿಟ್ ಪೋಲ್‌ಗಳ ವಿಷಯಕ್ಕೆ ಬಂದರೆ ಬಹುತೇಕ ಕಂಪನಿಗಳು ಬಿಜೆಪಿಗೆ ಗೆಲುವು ಸೂಚಿಸಿವೆ. ಬಹುತೇಕ ಎಲ್ಲಾ ಸಮೀಕ್ಷಾ ಕಂಪನಿಗಳು ಈ ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಗೆಲುವು ಸಾಧಿಸಲಿದೆ ಹಾಗೂ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಆದಾಗ್ಯೂ, ಕೆಕೆ ಸಮೀಕ್ಷೆಯು ಎಎಪಿ 39 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಬಿಜೆಪಿ 22 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿರುವುದು ದೆಹಲಿ ಜನತೆಯಲ್ಲಿ ತೀರ ಕುತೂಹಲ ಕೆರಳಿಸಿದೆ.

Related Articles

Leave a Reply

Your email address will not be published. Required fields are marked *

Back to top button