ಭಾರತ ಮತ್ತು ಚೀನಾ (Indo-China Conflict) ನಡುವೆ ಪೂರ್ವ ಲಡಾಖ್‌ನ (Eastern Ladakh) ಗಡಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ದೊಡ್ಡ ಮಟ್ಟದ ಸೈನಿಕ ಗಲಭೆಗಳು ನಡೆಯುತ್ತಿವೆ. ಕಳೆದ ವರ್ಷ ಜೂನ್ 15 ರಂದು ಈ ಭಾಗದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಈ ಸಂಘರ್ಷದಲ್ಲಿ ಎರಡೂ ಕಡೆ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದವು. ಈ ಘಟನೆಯ ನಂತರ ಎರಡೂ ದೇಶದ ಸಂಬಂಧವೂ ಅಷ್ಟಕ್ಕಷ್ಟೆಎಂಬಂತಿತ್ತು.
ಅಲ್ಲದೆ, ಗಡಿ ಭಾಗದಲ್ಲಿ ಪ್ರಕ್ಷುಬ್ಧತೆ ನಿರಂತರವಾಗಿದ್ದು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇತ್ತೀಚೆಗೆ ಎರಡೂ ದೇಶದ ಕಮಾಂಡರ್ ಮಟ್ಟದ ಮಾತುಕತೆ ನಡೆದಿತ್ತು. ಆದರೆ, ಗಡಿ ಭಾಗದಲ್ಲಿ ಸೇನಾ ಸಂಘರ್ಷದಿಂದಾಗಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಬಿರುಕು ಬಿಟ್ಟಿದ್ದರೂ, ಉಭಯ ದೇಶಗಳ ವ್ಯಾಪಾರದ (India-China Trade) ಪ್ರಮಾಣ ಮಾತ್ರ ಈ ವರ್ಷ ದಾಖಲೆ ಬರೆದಿದೆ. ಎರಡೂ ದೇಶದ ವ್ಯಾಪಾರ ವಹಿವಾಟು ಈ ವರ್ಷ 10 ಸಾವಿರ ಕೋಟಿ ಡಾಲರ್ ದಾಟಲಿದೆ ($100 Billion Mark) ಎಂದು ಅಂದಾಜಿಸಲಾಗಿದೆ. ಈ ವರ್ಷದ ಒಂಬತ್ತು ತಿಂಗಳಲ್ಲಿ ವ್ಯಾಪಾರದ ಒಟ್ಟು ಮೊತ್ತವು ಈಗಾಗಲೇ 9 ಸಾವಿರ ಕೋಟಿ ಡಾಲರ್ ತಲುಪಿದೆ ಎಂದು ವರದಿಗಳು ತಿಳಿಸಿವೆ.
ಭಾರತ-ಚೀನಾ ವ್ಯಾಪಾರದಲ್ಲಿ ದಾಖಲೆ:
2021 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಚೀನಾದ ಒಟ್ಟು ಆಮದು ಮತ್ತು ರಫ್ತುಗಳು ವರ್ಷದಿಂದ ವರ್ಷಕ್ಕೆ ಶೇ. 22.7 ಹೆಚ್ಚಾಗಿದ್ದು 28.33 ಟ್ರಿಲಿಯನ್ ಯುವಾನ್‌ಗೆ (ಸುಮಾರು 4.38 ಲಕ್ಷ ಕೋಟಿ ಡಾಲರ್) ತಲುಪಿದೆ ಎಂದು ಅಧಿಕೃತ ಅಂಕಿಅಂಶಗಳು ಬುಧವಾರ ಬಿಡುಗಡೆಯಾಗಿವೆ. ಈ ಅಂಕಿ-ಅಂಶವು 2019 ರ ಸಾಂಕ್ರಾಮಿಕದ ಮುಂಚಿನ ಮಟ್ಟಕ್ಕಿಂತ ಶೇ.23.4 ದಷ್ಟು ಹೆಚ್ಚಳವಾಗಿದೆ ಎಂದು ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ ಹೇಳಿದೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರವು 9 ಸಾವಿರ ಕೋಟಿ ಡಾಲರ್ ತಲುಪಿದ್ದು, ಇದು ಕಳದೆ ವರ್ಷಕ್ಕಿಂತ ಶೇ.49.3 ಹೆಚ್ಚಾಗಿದೆ ಎಂದು ಚೀನಾ ಕಸ್ಟಮ್ಸ್ ಬಿಡುಗಡೆ ಮಾಡಿದ ಒಂಬತ್ತು ತಿಂಗಳ ಅಂಕಿಅಂಶಗಳು ಹೇಳಿದೆ.