ಸುದ್ದಿ

ಮಹಿಳಾ ತಹಶೀಲ್ದಾರ್ ಲಂಚಾವತಾರ!

ಚಿಕ್ಕಮಗಳೂರು: ಮನೆ ಹಕ್ಕು ಪತ್ರ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಶೃಂಗೇರಿ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಜಿಲ್ಲೆಯ ಶೃಂಗೇರಿ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಕಾವಡಿ ಗ್ರಾಮದ ಸಂಜಯ್ ಕುಮಾರ್ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ತಹಶೀಲ್ದಾರ್ ಅಂಬುಜಾ, ವಿಎ ಸಿದ್ದಪ್ಪರನ್ನ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ. ಕಳೆದ ಕೆಲವು ತಿಂಗಳಿನಿಂದಲೂ ತಹಶೀಲ್ದಾರ್ ವಿರುದ್ಧ ಭಾರೀ ಅಕ್ರಮ ಎಸಗಿರುವ ಆರೋಪ ಕೇಳಿಬರುತ್ತಿತ್ತು. ಮನೆ ಹಕ್ಕು ಪತ್ರ-ಅಕ್ರಮವಾಗಿ ಖಾತೆಗಳನ್ನ ಮಾಡಿಕೊಡಲು ಲಂಚ ಪಡೆಯುತ್ತಿದ್ದಾರೆ. ಹಣ ನೀಡದಿದ್ದರೆ ಯಾವ ಕೆಲಸ ಕೂಡ ಆಗೋದಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ಇದೀಗ ಎಸಿಬಿ ಬಲೆಗೆ ಬೀಳುವ ಮೂಲಕ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಸಂಜಯ್ ಎಂಬುವರಿಗೆ ಮನೆಯ ಹಕ್ಕು ಪತ್ರ ನೀಡಲು 60 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಮೊದಲ ಕಂತಿನ 25 ಸಾವಿರ ಹಣ ಪಡೆಯುವಾಗ ತಹಶೀಲ್ದಾರ್, ಗ್ರಾಮ ಲೆಕ್ಕಿಗ ಟ್ರ್ಯಾಪ್ ಆಗಿದ್ದಾರೆ.

ನ್ನೆ ಮಧ್ಯಾಹ್ನದ ವೇಳೆಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ವಿಎ ಸಿದ್ದಪ್ಪ ಹಾಗೂ ತಹಶೀಲ್ದಾರ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ರು. ತಹಶೀಲ್ದಾರ್ ಅಂಬುಜಾ ಟ್ರ್ಯಾಪ್ ಆಗಿದ್ದಾರೆ ಅನ್ನೋ ಸುದ್ದಿ ತಿಳಿಯುತ್ತಲೇ ಶೃಂಗೇರಿ ಪ್ರವಾಸಿ ಮಂದಿರದ ಬಳಿ ಜನರು ಜಮಾಯಿಸಿದ್ದರು. ಯಾವುದೇ ಕಾರಣಕ್ಕೂ ಕೂಡ ತಹಶೀಲ್ದಾರ್ ಅಂಬುಜಾರನ್ನ ಬಂಧಿಸಬಾರದು ಅಂತಾ ಅಧಿಕಾರಿಗಳ ಮೇಲೆ ಒತ್ತಡ ಹಾಕಿದರು. ಗ್ರಾಮ ಲೆಕ್ಕಾಧಿಕಾರಿಯನ್ನ ಬೇಕಾದ್ರೆ ಬಂಧಿಸಿ, ತಹಸೀಲ್ದಾರ್ರನ್ನ ವಶಕ್ಕೆ ಪಡೆಯಬಾರದು ಅಂತಾ ಆಕ್ರೋಶ ಹೊರಹಾಕಿದರು. ನಿನ್ನೆ ಸಂಜೆ ನಾಲ್ಕು 4ರಿಂದ ರಾತ್ರಿ 8 ಗಂಟೆ ತನಕ ನೂರಕ್ಕೂ ಹೆಚ್ಚು ಮಂದಿ ಐಬಿ ಬಳಿ ಜಮಾಯಿಸಿ ತಹಶೀಲ್ದಾರ್ ಪರ ವಕಾಲತ್ತು ವಹಿಸಿದ್ರು.

ಐಬಿ ಬಳಿ ಬಂದಿದ್ದ ಜನರನ್ನ ಅರ್ಥಮಾಡಿಸುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲಾಯಿತು. ನಾವು ಕಾನೂನು ರೀತಿಯಲ್ಲಿ ದಾಳಿ ನಡೆಸಿ ಅವರನ್ನ ವಶಕ್ಕೆ ತೆಗೆದುಕೊಂಡಿದ್ದೇವೆ ಅಂತಾ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಜನರಿರಲಿಲ್ಲ. ಜನರ ವರ್ತನೆ ಕಂಡು ಅಧಿಕಾರಿಗಳೇ ಬೆಸ್ತು ಬೀಳುವ ಪರಿಸ್ಥಿತಿ ಉಂಟಾಗಿತ್ತು. ಕೊನೆಗೆ ತಮ್ಮ ಕೆಲಸಕ್ಕೆ ಅಡ್ಡಿ ಪಡಿಸಿದರೆ ಕಾನೂನು ರೀತಿ ತಾವುಗಳು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದಾಗ ಸ್ವಲ್ಪಮಟ್ಟಿಗೆ ಜನರು ಸೈಲೆಂಟಾದರು. ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಗೀತಾ, ಇನ್ಸ್ ಪೆಕ್ಟರ್ ಮಂಜುನಾಥ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ತಹಶೀಲ್ದಾರ್ ಭಾರೀ ಅಕ್ರಮ ಎಸಗಿರುವ ಆರೋಪ, ಕಂದಾಯ ಸಚಿವರಿಗೆ ಪತ್ರ ಬರೆದಿದ್ದ ಗೃಹ ಸಚಿವ
ಅಂದಾಗೆ ಕಳೆದ ಕೆಲ ದಿನಗಳ ಹಿಂದೆ ಶೃಂಗೇರಿ ತಹಶೀಲ್ದಾರ್ ಅಂಬುಜಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವರಿಗೆ ಪತ್ರ ಬರೆದಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ. ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಹಾಗೂ ಎಂಎಲ್ಸಿ ಎಸ್.ಎಲ್ ಭೋಜೇಗೌಡ ಅವರು ಶೃಂಗೇರಿ ತಹಶೀಲ್ದಾರ್ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನೇ ಆಧರಿಸಿ ಗೃಹ ಸಚಿವರು, ಕಂದಾಯ ಸಚಿವರಿಗೆ ಪತ್ರ ಬರೆದು ಶೃಂಗೇರಿ ತಹಶೀಲ್ದಾರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ರು. ಈ ಪತ್ರ ಸಾಮಾಜಿಕ ಜಾಣತಾಣಗಳಲ್ಲಿ ವೈರಲ್ ಆಗಿ ಚರ್ಚೆಗೂ ಕೂಡ ಗ್ರಾಸವಾಗುತ್ತಲೇ ನಾನು ಗೃಹ ಸಚಿವರಿಗೆ ಯಾವುದೇ ಪತ್ರ ಬರೆದಿಲ್ಲ ಅಂತಾ ಟಿ.ಡಿ ರಾಜೇಗೌಡ ಪ್ರತಿಕ್ರಿಯೆ ನೀಡಿದ್ರು. ನನ್ನ ಸಹಿಯನ್ನ ನಕಲು ಮಾಡಿ ಪತ್ರ ಬರೆಯಲಾಗಿದೆ, ತಹಶೀಲ್ದಾರ್ ರನ್ನ ವರ್ಗಾವಣೆ ಮಾಡುವಂತೆ ನಾನು ಯಾವುದೇ ಪತ್ರ ಬರೆದಿಲ್ಲ ಅಂತಾ ಸಮಜಾಯಿಷಿ ಕೂಡ ನೀಡಿದ್ರು.

ಕಳೆದ 2 ವರ್ಷಗಳಿಂದಲೂ ಅಂಬುಜಾ ಶೃಂಗೇರಿಯಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಭಾರೀ ಅಕ್ರಮವೆಸಗಿರುಗ ಆರೋಪ ಆಗಾಗ ಕೇಳಿಬರುತ್ತಲೇ ಇತ್ತು. ಬೋಗಸ್ ಹಕ್ಕುಪತ್ರ ನೀಡುತ್ತಿರುವುದಾಗಿ ಗಂಭೀರ ಆರೋಪ ಕೇಳಿ ಬಂದಿತ್ತು. ಇದೀಗ ಮನೆ ಹಕ್ಕು ಪತ್ರಕ್ಕಾಗಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವುದು ಅಧಿಕಾರಿಯ ಕರಾಳ ಮುಖವನ್ನ ಬಯಲು ಮಾಡಿದೆ. ಈ ಮಧ್ಯೆ ತಹಶೀಲ್ದಾರ್ನನ್ನ ಬಂಧಿಸದಂತೆ ಕೆಲವರು ನಡೆಸಿದ ಹೈಡ್ರಾಮಾ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿರೋದು ಸುಳ್ಳಲ್ಲ.

ಒಟ್ನಲ್ಲಿ ಕೆಲವೆಡೆ ರಾಜಕಾರಣಿಗಳು ತಪ್ಪು ಮಾಡಿ ಸಿಕ್ಕಿಬಿದ್ದಾಗ ಜನರು ಜಮಾಯಿಸೋದು, ಗುಂಪುಗೂಡಿ ಒತ್ತಡ ತರುವ ಬೆಳವಣಿಗೆಗಳನ್ನ ಎಲ್ಲರೂ ನೋಡಿದ್ವಿ, ಇದೀಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್ ಪರ ಕೂಡ ಜನರು ನಿಂತು ಬೊಬ್ಬೆ ಹೊಡೆದಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

Related Articles

Leave a Reply

Your email address will not be published. Required fields are marked *

Back to top button