ಜಂತರ್ಮಂತರ್ ಮುಸ್ಲಿಂ ವಿರೋಧಿ ಘೋಷಣೆ ಪ್ರಕರಣ: ಆರೋಪಿ ಪಿಂಕಿ ಚೌಧರಿಗೆ ಜಾಮೀನು
ನವದೆಹಲಿ, ಅಕ್ಟೋಬರ್ 01: ದೆಹಲಿಯ ಜಂತರ್ಮಂತರ್ ಸಮೀಪ ಆಗಸ್ಟ್ನಲ್ಲಿ ಸಮಾವೇಶವೊಂದರಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಲ್ಲಿ ಓರ್ವರಾದ ಹಿಂದೂ ರಕ್ಷಾ ದಳದ ಮುಖ್ಯಸ್ಥ ಭೂಪಿಂದರ್ ತೋಮರ್ ಅಲಿಯಾಸ್ ಪಿಂಕಿ ಚೌಧರಿಗೆ ದೆಹಲಿ ನ್ಯಾಯಾಲಯವು ಗುರುವಾರ ಜಾಮೀನು ನೀಡಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಯಾಂಕ್ ನಾಯಕ್ ಆರೋಪಿ ಭೂಪಿಂದರ್ ತೋಮರ್ ಅಲಿಯಾಸ್ ಪಿಂಕಿ ಚೌಧರಿಗೆ 50,000 ರೂಪಾಯಿಗಳ ಜಾಮೀನು ಬಾಂಡ್ ಹಾಗೂ ಎರಡು ಶ್ಯೂರಿಟಿಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದೆ. ಜಾಮೀನು ನೀಡುವ ಸಂದರ್ಭದಲ್ಲಿ ದೆಹಲಿ ನ್ಯಾಯಾಲಯವು ಈಗಾಗಲೇ ದೆಹಲಿ ಹೈಕೋರ್ಟ್ ಭೂಪಿಂದರ್ ತೋಮರ್ಗೆ ಜಾಮೀನು ನೀಡಿರುವುದನ್ನು ಗಣನಗೆ ತೆಗೆದುಕೊಂಡು ಈ ಜಾಮೀನು ನೀಡಿದೆ. “ಆರೋಪಿ ಭೂಪಿಂದರ್ ತೋಮರ್ ಅಲಿಯಾಸ್ ಪಿಂಕಿ ಚೌಧರಿ ಆಗಸ್ಟ್ 8ರಂದು ಘಟನೆ ನಡೆದ ಸ್ಥಳದಿಂದ ಮಧ್ಯಾಹ್ನ 1.29 ಸುಮಾರಿಗೆ ತೆರಳಿದ್ದಾರೆ. ಆದರೆ ಈ ಸಂಜೆ ನಾಲ್ಕು ಗಂಟೆ ವೇಳೆಗೆ ಮುಸ್ಲಿಂ ವಿರೋಧಿ ಘೋಷಣೆ ಕೂಗಲಾಗಿದೆ. ಆದ್ದರಿಂದ ಭೂಪಿಂದರ್ ತೋಮರ್ ವಿಚಾರಣೆ ಅಗತ್ಯವಿಲ್ಲ,” ಎಂದು ಕೂಡಾ ನ್ಯಾಯಾಲಯ ಅಭಿಪ್ರಾಯಿಸಿದೆ.
“ಆರೋಪಿ ಪ್ರೀತ್ ಸಿಂಗ್ ಜೊತೆಗೆಯೇ ಆರೋಪಿ ಭೂಪಿಂದರ್ ತೋಮರ್ ಅಲಿಯಾಸ್ ಪಿಂಕಿ ಚೌಧರಿರನ್ನು ಬಿಡುಗಡೆ ಮಾಡಬೇಕು,” ಎಂದು ಕೂಡಾನ ನ್ಯಾಯಾಲಯ ಉಲ್ಲೇಖ ಮಾಡಿದೆ. ಇನ್ನು ಆರೋಪಿ ಭೂಪಿಂದರ್ ತೋಮರ್/ಪಿಂಕಿ ಚೌಧರಿಯ ಮಧ್ಯಂತರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿತ್ತು. “ನಾವು ತಾಲಿಬಾನ್ ರಾಜ್ಯದಲ್ಲಿ ಇಲ್ಲ. ಕಾನೂನಿನ ನಿಯಮವು ನಮ್ಮ ಬಹು ಸಂಸ್ಕೃತಿಯ ಪವಿತ್ರವಾದ ಆಡಳಿತ ತತ್ವವಾಗಿದೆ,” ಎಂದು ಸೆಷನ್ಸ್ ನ್ಯಾಯಾಲಯ ಹೇಳಿತ್ತು.
ಭಾರತ್ ಜೋಡೋ ಅಭಿಯಾನದಡಿ ದೆಹಲಿಯಲ್ಲಿ ವಸಾಹತುಶಾಹಿ ಕಾಲದ ಕಾನೂನುಗಳನ್ನು ವಿರೋಧಿಸಿ ಅಗಸ್ಟ್ 8ರಂದು ಸಮಾವೇಶ ನಡೆಸಲಾಗಿತ್ತು. ಈ ಕಾರ್ಯಕ್ರಮವನ್ನು ಬಿಜೆಪಿಯ ಮಾಜಿ ವಕ್ತಾರ ಅಶ್ವಿನಿ ಉಪಾಧ್ಯಾಯ ಆಯೋಜನೆ ಮಾಡಿದ್ದರು. ಈ ರ್ಯಾಲಿಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳು ಕೇಳಿ ಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. “ಜಂತರ್ ಮಂತರ್ನಲ್ಲಿ ಭಾರತ್ ಜೋಡೋ ಆಂದೋಲನದಿಂದ ಪ್ರತಿಭಟನೆ ಆಯೋಜಿಸಲಾಗಿದೆ. ವಕೀಲ ಮತ್ತು ಮಾಜಿ ಬಿಜೆಪಿ ವಕ್ತಾರ ಅಶ್ವಿನಿ ಉಪಾಧ್ಯಾಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ,” ಎಂದು ಭಾರತ್ ಜೋಡೋ ಆಂದೋಲನದ ಮಾಧ್ಯಮ ಉಸ್ತುವಾರಿ ಶೀಪ್ರಾ ಶ್ರೀವಾಸ್ತವ ತಿಳಿಸಿದ್ದರು. ಆದಾಗ್ಯೂ, “ಕೋಮು ಘೋಷಣೆಗಳನ್ನು ಹಾಕಿದವರಿಗೂ ನಮ್ಮಈ ಆಂದೋಲನಕ್ಕೂ ಯಾವುದೇ ಸಂಬಂಧವಿಲ್ಲ,” ಎಂದು ಈ ಆಂದೋಲನದ ಮಾಧ್ಯಮ ಉಸ್ತುವಾರಿ ಶೀಪ್ರಾ ಶ್ರೀವಾಸ್ತವ ಹೇಳಿದ್ದರು.
ಈ ನಡುವೆ ಈ ಕಾರ್ಯಕ್ರಮಕ್ಕೆ ಕೋವಿಡ್ -19 ಮಾರ್ಗಸೂಚಿಯ ಪ್ರಕಾರ ಕೂಟಗಳನ್ನು ಕೂಡುವುದು ನಿಷೇಧಿಸಿಲಾಗಿದ್ದ ಕಾರಣದಿಂದಾಗಿ ಪೊಲೀಸರು ಅವಕಾಶ ನೀಡಿರಲಿಲ್ಲ ಎಂದು ಕೂಡಾ ಹೇಳಲಾಗಿದೆ. ಈ ಬಗ್ಗೆ ಘಟನೆ ನಡೆದ ಬಳಿ ಮಾತನಾಡಿದ್ದ ಹೊಸದಿಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ”ಈ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಆದರೆ ಬಳಿಕ ಉಪಾಧ್ಯಾಯ ಬೇರೆಯೇ ಒಳಾಂಗಣ ಸ್ಥಳ ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿತ್ತು,” ಎಂದಿದ್ದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಶ್ವಿನಿ ಉಪಾಧ್ಯಾಯ ಹಾಗೂ ಇತರೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದರು. ಪ್ರೀತ್ ಸಿಂಗ್, ವಿನೀತ್ ಕ್ರಾಂತಿ, ಆರೋಪಿ ಭೂಪಿಂದರ್ ತೋಮರ್ ಅಲಿಯಾಸ್ ಪಿಂಕಿ ಚೌಧರಿ ಬಂಧಿತರು ಆಗಿದ್ದಾರೆ.