ಕೋವಿಡ್: ಸಜ್ಜಾದ ಸಾಗರದ ಆಸ್ಪತ್ರೆ, ಶೀಘ್ರ ಕಾರ್ಯಾರಂಭದ ನಿರೀಕ್ಷೆ

ಸಾಗರ: ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿದ್ದ ತಾಲ್ಲೂಕಿನ ಜನರು ಇನ್ನೂ ಆ ಕರಾಳ ನೆನಪುಗಳ ಗುಂಗಿನಿಂದ ಹೊರಬಂದಿಲ್ಲ. ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳು ಇಂದಿಗೂ ನೆಮ್ಮದಿ ಕಳೆದುಕೊಂಡಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದುಬಾರಿ ವೆಚ್ಚ ತುಂಬಿ ಗುಣಮುಖರಾಗಿ ಬಂದವರ ಗೋಳು ಕೂಡ ಹೇಳತೀರದು.
ಈ ನಡುವೆ ಕೋವಿಡ್ ಮೂರನೇ ಅಲೆ ಮತ್ತೆ ಬರುತ್ತದೆಯೇ ಎಂಬ ಆತಂಕದ ನಡುವೆ ಅದನ್ನು ಎದುರಿಸಲು ತಾಲ್ಲೂಕು ಆಡಳಿತ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಸೋಂಕಿನ ಪ್ರಮಾಣ ತೀರಾ ಕಡಿಮೆ ಇದ್ದು, ರೋಗ ಲಕ್ಷಣ ಅತಿಯಾಗಿ ಕಾಣಿಸಿಕೊಳ್ಳದೇ ಇದ್ದ ರೋಗಿಗಳಿಗೆ ಮಾತ್ರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಉಳಿದ ರೋಗಿಗಳನ್ನು ದೊಡ್ಡ ದೊಡ್ಡ ನಗರ ಪ್ರದೇಶದ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿತ್ತು.
ಇದೀಗ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಹಲವು ಹೊಸ ಸೌಲಭ್ಯಗಳು ಬರುತ್ತಿವೆ.
ಪ್ರಸ್ತುತ ಕೋವಿಡ್ ಪರೀಕ್ಷೆ ಮಾಡಿಸಿದವರ ಗಂಟಲ ದ್ರವವನ್ನು ಶಿವಮೊಗ್ಗದ ಪ್ರಯೋಗಾಯಲಕ್ಕೆ ಕಳುಹಿಸಿ ಫಲಿತಾಂಶ ಬರಲು 3ರಿಂದ 4 ದಿನ ಹಿಡಿಯುತ್ತಿದೆ. ಇದೀಗ ಸರ್ಕಾರ ಇಲ್ಲಿನ ಆಸ್ಪತ್ರೆಗೆ ಆರ್ಟಿಪಿಸಿಆರ್ ಪ್ರಯೋಗಾಲಯ ಮಂಜೂರು ಮಾಡಿದ್ದು, ಶೀಘ್ರ ಅದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚಿನ ರೋಗಿಗಳನ್ನು ಬೇರೆ ಊರಿನ ಆಸ್ಪತ್ರೆಗೆ ಕಳುಹಿಸಲು ಮುಖ್ಯ ಕಾರಣವಾದ ಸಂಗತಿಯೆಂದರೆ ಆಮ್ಲಜನಕ ಕೊರತೆ.
ಇದೀಗ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಲು ಸಿದ್ಧತೆ ನಡೆದಿದೆ. 4 ಸಾವಿರ ಲೀಟರ್ನಷ್ಟು ಆಮ್ಲಜನಕ ಸಂಗ್ರಹಿಸಿಡುವ ಘಟಕ ಇಲ್ಲಿ ಸಜ್ಜುಗೊಳ್ಳುತ್ತಿದೆ.
ಕೋವಿಡ್ ರೋಗಿಗಳು ರಕ್ತಕ್ಕೆ ಸಂಬಂಧಪಟ್ಟ ವಿವಿಧ ಪರೀಕ್ಷೆಗಳಿಗಾಗಿ ಖಾಸಗಿ ಪ್ರಯೋಗಾಲಯಗಳಿಗೆ ಹೆಚ್ಚಿನ ಹಣ ಪಾವತಿಸಬೇಕಿತ್ತು. ಎಲ್ಲಾ ಪರೀಕ್ಷೆಗಳನ್ನು ನಡೆಸುವ ಎರಡು ಹೊಸ ಯಂತ್ರಗಳು ಬಂದಿವೆ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಎಸ್.ಮೋಹನ್.
ಸದ್ಯಕ್ಕೆ ತಾಲ್ಲೂಕಿನಲ್ಲಿ ಕೋವಿಡ್ ಪಾಸಿಟಿವ್ ದರ ಶೇ 1ರಷ್ಟು ಮಾತ್ರವಿದೆ. ಈ ನಡುವೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧದ ಕೊರತೆ ಸ್ವಲ್ಪಮಟ್ಟಿಗೆ ಕಾಣಿಸಿಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಕೊರತೆ ನಿವಾರಣೆಯಾಗಲಿದೆ ಎಂಬ ವಿಶ್ವಾಸ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರಕಾಶ್ ಬೋಸ್ಲೆ ಅವರದ್ದು.
ಮಕ್ಕಳ ಉಸಿರಾಟದ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಸಿ ಪ್ಯಾಪ್ ಯಂತ್ರಗಳನ್ನು ತರಿಸಿಕೊಳ್ಳಲು ಆಸ್ಪತ್ರೆ ಮುಂದಾಗಿದೆ. ಮುಂಜಾಗ್ರತೆ ಕ್ರಮವಾಗಿ ಕೇರಳದಿಂದ ಇಲ್ಲಿಗೆ ಬರುವವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗುತ್ತಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಕೋವಿಡ್ ಆರೈಕೆ ಕೇಂದ್ರಗಳನ್ನು ತಕ್ಷಣ ಆರಂಭಿಸಲು ಕೂಡ ಆರೋಗ್ಯ ಇಲಾಖೆ ಸಿದ್ಧವಿದೆ.