ರಾಜ್ಯ

ಬೆಟ್ಟದಪುರ: ಡೆಂಗಿ ಜ್ವರಕ್ಕೆ ಒಂದೇ ಕುಟುಂಬದ ಇಬ್ಬರು ಮಕ್ಕಳ ಸಾವು

ಬೆಟ್ಟದಪುರ: ಸಮೀಪದ ಮರುದೂರು ಅರಳಿಮರದ ಕೊಪ್ಪಲು ಗ್ರಾಮದ ರಘುನಾಥ್‌-ಪ್ರತಿಮಾ ದಂಪತಿ ಮಕ್ಕಳಾದ ಯಶಸ್ವಿನಿ (9), ಧನುಷ್ (7) ಡೆಂಗಿ ಜ್ವರದಿಂದ ಮೃತಪಟ್ಟಿದ್ದಾರೆ.

ಇಬ್ಬರಿಗೂ ಭಾನುವಾರ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಯಶಸ್ವಿನಿ ಮಂಗಳವಾರ ರಾತ್ರಿ ಮೃತಪಟ್ಟಳು. ಬುಧವಾರ ರಾತ್ರಿ ಧನುಷ್‌ ಮೃತಪಟ್ಟ.

‘ಇಬ್ಬರು ಮಕ್ಕಳನ್ನೂ ಕಳೆದುಕೊಂಡ ನಮಗೆ ದಿಕ್ಕೇ ತೋಚದಾಗಿದೆ’ ಎಂದು ದಂಪತಿ ನೋವು
ತೋಡಿಕೊಂಡರು.

‘ಗ್ರಾಮದ ಮನೆಮನೆಗೆ ಭೇಟಿ ನೀಡಿ ಲಾರ್ವಾ, ಜ್ವರ ಸಮೀಕ್ಷೆ ನಡೆಸಲಾ ಗುತ್ತದೆ. ಇಬ್ಬರು ವೈದ್ಯಾಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದಾರೆ’ ಎಂದು ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಆರ್.ಪ್ರಕಾಶ್ ತಿಳಿಸಿದರು. ಮಾಜಿ ಶಾಸಕ ಕೆ.ವೆಂಕಟೇಶ್ ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.

‘ಗ್ರಾಮದಲ್ಲಿ 15ಕ್ಕೂ ಹೆಚ್ಚು ಜನರು ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ. ಇಬ್ಬರ ಸಾವಿನ ಬಳಿಕ ಆರೋಗ್ಯ ಸಿಬ್ಬಂದಿ ಬಂದಿದ್ದಾರೆ’ ಎಂದು ಹರ್ಷಕುಮಾರ್, ರಘು, ಸಾಗರ್, ಚಂದ್ರಶೇಖರ್, ರಾಜೇಗೌಡ ದೂರಿದರು.

‘ಗ್ರಾಮದಲ್ಲಿ ಸ್ವಚ್ಛತೆ ಇಲ್ಲ. ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದ್ದು, ಮನೆಯಲ್ಲಿ ಮೂವರು ಅನಾರೋಗ್ಯ ದಿಂದ ಬಳಲುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜವರೇಗೌಡ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button