ವಿಜಯಪುರ/ಹಾವೇರಿ: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತಗಳ ಎಣಿಗೆ ಆರಂಭಗೊಂಡಿದೆ. ಈಗಾಗಲೇ ಅಂಚೆ ಮತಗಳ ಎಣಿಕೆ ಮುಕ್ತಾಯಗೊಂಡಿದೆ. ಸಿಂದಗಿಯಲ್ಲಿ ಬಿಜೆಪಿಯ ರಮೇಶ್ ಭೂಸನೂರು ಮತ್ತು ಹಾನಗಲ್ ನಲ್ಲಿ ಕಾಂಗ್ರೆಸ್ ನ ಶ್ರೀನಿವಾಸ್ ವಿ ಮಾನೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಮೂರನೇ ಸ್ಥಾನ ಕಾಯ್ದುಕೊಂಡಿದೆ.
ಸಿಂದಗಿ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾದ ಕಾರಣ ಉಪ ಚುನಾವಣೆ ನಡೆಯುತ್ತಿದೆ. ಹಾಗಾಗಿ ಜೆಡಿಎಸ್ ಗೆ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.ಸಿಂದಗಿ ಕ್ಷೇತ್ರದ ಮತ ಎಣಿಕೆ ವಿಜಯಪುರದ ಸೈನಿಕ ಶಾಲೆ ಆವರಣದ ಒಡೆಯರ್ ಹೌಸ್ ನಲ್ಲಿ ನಡೆಯುತ್ತಿದ್ರೆ, ಹಾನಗಲ್ ಕ್ಷೇತ್ರದ ಮತ ಎಣಿಕೆ ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿರುವ ಸರಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ.
ಸಿಂದಗಿ ಬಿಜೆಪಿ ಸಂಭ್ರಮಾಚರಣೆ ಆರಂಭ
ಸಿಂದಗಿಯಲ್ಲಿ ನಾಲ್ಕನೇ ಸುತ್ತು ಸಹ ಮುಕ್ತಾಯಗೊಂಡಿದ್ದು, ಬಿಜೆಪಿ ಮುನ್ನಡೆಯಲ್ಲಿದೆ. ರಮೇಶ್ ಭುಸನೂರು ಮೊದಲ ಸುತ್ತಿನಲ್ಲಿಯೇ ಮೂರು ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೂರು ನಾಲ್ಕು ಸುತ್ತುಗಳಲ್ಲಿ ಸಿಂದಗಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಹಿನ್ನೆಲೆ ಕಮಲ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಆಗಮಿಸುತ್ತಿದ್ದಾರೆ. ಮುನ್ನಡೆ ಕಾಯ್ದುಕೊಂಡ ಹಿನ್ನೆಲೆ ರಮೇಶ್ ಭೂಸನೂರ್ ಪತ ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಅಂತರ ಹೆಚ್ಚಿಸಿಕೊಳ್ಳುತ್ತಿರುವ ರಮೇಶ್ ಭೂಸನೂರ್
ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಮೊದಲ ಸುತ್ತಿನಿಂದಲೇ ಮುನ್ನಡೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಾಲ್ಕನೇ ಸುತ್ತಿನಲ್ಲಿಯೂ 8 ಸಾವಿರ ಮತಗಳ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ. ಬಿಜೆಪಿ 18,235, ಕಾಂಗ್ರೆಸ್ 11,227 ಜೆಡಿಎಸ್: 596 ಮತ ಪಡೆದುಕೊಂಡಿದೆ.