Raichur Airport: ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ; ಮಹತ್ವದ ಅಪ್‌ಡೇಟ್ ನೀಡಿದ ಸಚಿವ ಎಂ.ಬಿ ಪಾಟೀಲ್

ರಾಯಚೂರು: ವಿಮಾನ ನಿಲ್ದಾಣದ ಯೋಜನೆಗೆ ಸಂಬಂದಪಟ್ಟಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಸಭೆಯ ಬಗೆಗಿನ ಮಾಹಿತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ರಾಯಚೂರು ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಪಟ್ಟಂತೆ ಗುರುವಾರ ಸಚಿವ ಸಂಪುಟದ ಸದಸ್ಯರಾದ ಪ್ರಕಾಶ್ ಪಾಟೀಲ್ ಮತ್ತು ಎನ್‌ಎಸ್ ಬೋಸರಾಜು ಹಾಗೂ ಸಂಬಂಧಪಟ್ಟ ಇಲಾಖೆಗಳ ಉನ್ನತ ಅಧಿಕಾರಿಗಳ ಜೊತೆ ಸಚಿವ ಎಂಬಿ ಪಾಟೀಲ್ ಸಭೆ ನಡೆಸಿದರು.
25 ಎಕರೆ ಭೂಸ್ವಾಧೀನ ಪ್ರಕ್ರಿಯೆ
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ 25 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 20 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು ಈಗಾಗಲೇ ಅಂತಿಮ ಸೂಚನೆ ಹೊರಡಿಸಲಾಗಿದೆ. ಮುಂದಿನ 15 ದಿನಗಳ ಒಳಗಾಗಿ ಭೂಸ್ವಾಧೀನ ಪೂರ್ಣಗೊಳಿಸಿ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರ ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸೈಟ್ ಕ್ಲಿಯರೆನ್ಸ್ ನೀಡಿದ್ದ, ಲ್ಯಾಂಡ್ ಕ್ಲಿಯರೆನ್ಸ್ ಪಡೆದರುವ ಸ್ಥಳಗಳಲ್ಲಿ ತ್ವರಿತವಾಗಿ ಕಾಂಪೌಂಡ್ ನಿರ್ಮಾಣ ಕೆಲಸ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಬರುವ ಮಾರ್ಚ್ ಅಂತ್ಯದ ವೇಳೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೃಹತ್ ಜವಳಿ ಪಾರ್ಕ್ ಸ್ಥಾಪನೆ
ಕೈಗಾರಿಕೆಗಳ ನಿರ್ಮಾಣಕ್ಕಾಗಿ 685 ಎಕರೆ ಭೂಮಿಯನ್ನು ಸ್ವಾಧೀನಪಡಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೃಹತ್ ಜವಳಿ ಪಾರ್ಕ್ ಸ್ಥಾಪನೆಗಾಗಿ 1,000 ಎಕರೆ ಭೂಮಿಯನ್ನು ಗುರುತಿಸಿ ಪ್ರಾಥಮಿಕ ಅಧಿಸೂಚನೆ ತಯಾರಿಸುವಂತೆ ಕೂಡ ಸೂಚನೆ ಕೊಟ್ಟಿದ್ದು, ರಾಯಚೂರು ಅಭಿವೃದ್ಧಿಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.
ಕೆಐಎಡಿಬಿ ವ್ಯಾಪ್ತಿಯ ಖಾಲಿ ಇರುವ ನಿವೇಶನ ಮತ್ತು ಮನೆಗಳನ್ನು ವಿಲೇವಾರಿ ಮಾಡುವ ಬಗ್ಗೆ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವರದಿ: ವಿಶ್ವನಾಥ್ ಸಾಹುಕಾರ್ tv8kannada ರಾಯಚೂರು