Breaking News: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಕೃತ್ಯದ ಹಿಂದಿನ ಕಾರಣ ಬಾಯ್ಬಿಟ್ಟ ಆರೋಪಿ

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಮೊನ್ನೆ (ಜನವರಿ 11) ರಾತ್ರಿ ಕಿಡಿಗೇಡಿಗಳು ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ ಅಮಾನವೀಯ ಘಟನೆ ನಡೆದಿತ್ತು. ಘಟನೆ ಬಗ್ಗೆ ತಿಳಿದ ಕೂಡಲೇ ಮಾಲೀಕ ಕರ್ಣ ಕಾಟನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿ ದೂರನ್ನು ನೀಡಿದರು.
ದೂರಿನನ್ವಯ ತನಿಖೆ ಆರಂಭಿಸಿದ ಕಾಟನ್‌ಪೇಟೆ ಪೊಲೀಸರು ನಿನ್ನೆ ( ಜನವರಿ 12 ) ರಾತ್ರಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಿಹಾರದ ಚಂಪರಣ್ ಮೂಲದ ಸೈಯದ್ ನಸ್ರು ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಜನವರಿ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇನ್ನು ಸೈಯದ್ ನಸ್ರು (30) ಕೃತ್ಯ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್, ಬಟ್ಟೆ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಈತ ಪೊಲೀಸ್ ವಿಚಾರಣೆ ವೇಳೆ ಹಸುಗಳ ಕೆಚ್ಚಲನ್ನು ಕತ್ತರಿಸಿದ್ದು ಯಾಕೆ ಎಂಬ ವಿಷಯವನ್ನು ಬಾಯ್ಬಿಟ್ಟಿದ್ದಾನೆ.
ಕುಡಿದ ಮತ್ತಿನಲ್ಲಿ ಈ ಕೆಲಸ ಮಾಡಿದ್ದಾಗಿ ಸೈಯದ್ ನಸ್ರು ಪೊಲೀಸರ ಮುಂದೆ ಹೇಳಿಕೊಂಡಿದ್ದು, ಕೃತ್ಯದಲ್ಲಿ ಈತನ ಜತೆ ಕೈ ಜೋಡಿದ್ದವರ ಪತ್ತೆಗೆ ಬಲೆ ಬೀಸಿದ್ದಾರೆ.