ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡುವಂತೆ ನಂಜನಗೂಡಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹ

ನಂಜನಗೂಡು: ರಾಜ್ಯ ಸಭೆ ಸದನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ನಂಜನಗೂಡಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಆಗ್ರಹಿಸಿದ್ದಾರೆ.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ಅಮಿತ್ ಶಾ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಈ ದೇಶದ ಕೇಂದ್ರ ಗೃಹ ಸಚಿವ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ಖಂಡಿಸುತ್ತದೆ.
ಅಮಿತ್ ಶಾ ರವರು, ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡುವ ಬದಲು ದೇವರನ್ನು ಸ್ಮರಣೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ರವರನ್ನು ನಾವು ಒಪ್ಪಿಕೊಂಡು ಅವರು ಬರೆದಿರುವ ಸಂವಿಧಾನವನ್ನು ಅನುಸರಣೆ ಮಾಡದಿದ್ದರೆ ಇವತ್ತು ಹೆಣ್ಣು ಮಕ್ಕಳು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಅಮಿತ್ ಶಾ ಅವರೇ ನಿಮ್ಮ ಗೃಹ ಸಚಿವ ಸ್ಥಾನವೂ ಕೂಡ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಕೊಡುಗೆಯಾಗಿದೆ. ಅಂಬೇಡ್ಕರ್ ಅವರ ಸಂವಿಧಾನ ಇಲ್ಲದಿದ್ದರೆ ಅಮಿತ್ ಶಾ ರವರು ಕೇಂದ್ರ ಗೃಹ ಸಚಿವರಾಗಲು ಸಾಧ್ಯವಾಗುತ್ತಿರಲಿಲ್ಲ, ನರೇಂದ್ರ ಮೋದಿಯವರು ಪ್ರಧಾನಿಯಾಗಲು ಆಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ಅಂಬೇಡ್ಕರ್ ರವರನ್ನು ಬಿಟ್ಟು ದೇವರನ್ನು ಸ್ಮರಣೆ ಮಾಡಿದರೆ ಈ ದೇಶದಲ್ಲಿ ಹೆಣ್ಣು ಮಕ್ಕಳು ದೇವದಾಸಿ ಆಗುತ್ತಿದ್ದರು. ಅಂಬೇಡ್ಕರ್ ಮತ್ತು ಸಂವಿಧಾನ ವಿಚಾರವನ್ನು ಗಂಭೀರವಾಗಿ ಮಾತನಾಡಬೇಕು. ಅಂಬೇಡ್ಕರ್ ಮತ್ತು ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ನಿಮಗೆ ಗೌರವ ಇಲ್ಲದಿದ್ದರೆ ಸುದ್ದಿಗೋಷ್ಠಿ ಮಾಡಿ ಪತ್ರಿಕೆ ಹೇಳಿಕೆ ಕೊಡಿ ಅದನ್ನು ಬಿಟ್ಟು ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತನಾಡಬಾರದು. ಈ ಕೂಡಲೇ ಸಚಿವ ಸ್ಥಾನದಿಂದ ರಾಜೀನಾಮೆ ನೀಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಧ್ಯಕ್ಷರು ಸತೀಶ್ ರಾವ್, ರೈತ ಸಂಘದ ಮುಖಂಡರಾದ ಕೆಲ್ಲೂಪುರ ಮಹದೇವಸ್ವಾಮಿ, ಅಹಲ್ಯ ನಾಗರಾಜು, ಮಹದೇವನಾಯಕ, ಕೃಷ್ಣಪುರ ಮೋಹನ್, ತಿಮ್ಮನಾಯಕ , ಮಮತ ಸೇರಿದಂತೆ ಹಲವರು ಹಾಜರಿದ್ದರು.