11 ವರ್ಷಗಳ ನಂತರ ಬಾಗಿಲು ತೆರೆದ ಮಾರಮ್ಮನ ದೇವಾಲಯ…ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಯಶಸ್ವಿ ಶಾಂತಿಸಭೆ…ಗ್ರಾಮದಲ್ಲಿ ಸಂತಸ…

ಮೈಸೂರು: 11 ವರ್ಷಗಳ ಕಾಲ ಮುಚ್ಚಿದ ಮಾರಮ್ಮನ ದೇವಸ್ಥಾನದ ಬಾಗಿಲನ್ನು ತೆರೆಯಲಾಯಿತು. ಮೈಸೂರು ತಾಲ್ಲೂಕು ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ತೆಗೆದು ಕೊಂಡ ತೀರ್ಮಾನದಂತೆ ಇಂದು ಬಾಗಿಲು ತೆರೆದು ವಿಶೇಷ ಪೂಜೆ ನೆರವೇರಿಸಲಾಯಿತು.
ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಇಂದಿನಿಂದ ಎಂದಿನಂತೆ ಪೂಜಾ ಕೈಂಕರ್ಯಗಳ ನೆರವೇರಲಿದೆ. ಸುಮಾರು 11 ವರ್ಷಗಳ ಹಿಂದೆ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ಭಾರಿ ವಿವಾದ ಉಂಟಾಗಿ ದೇವಾಲಯದ ಬಾಗಿಲಿಗೆ ಬೀಗ ಹಾಕಲಾಗಿತ್ತು. ದೇವಾಲಯದ ಬಾಗಿಲು ತೆರೆಸಲು ಸಾಕಷ್ಟು ಬಾರಿ ಸಂಧಾನ ಸಭೆಗಳು ನಡೆದಿತ್ತು. ಹೀಗಿದ್ದೂ ಗ್ರಾಮದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇಂದು ತಹಶೀಲ್ದಾರ್ ಕಛೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಮಹೇಶ್ ಕುಮಾರ್ ರವರ ನೇತೃತ್ವದಲ್ಲಿ ಶಾಂತಿ ಸಭೆ ಕರೆದಿದ್ದರು. ಎಲ್ಲಾ ಕೋಮಿನ 5 ಮುಖಂಡರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸುಧೀರ್ಘ ಚರ್ಚೆ ನಂತರ ಮಾರಮ್ಮ ದೇವಾಲಯ ಬಾಗಿಲು ಮತ್ತೆ ತೆರೆಯುವ ನಿರ್ಧಾರಕ್ಕೆ ಬರಲಾಯಿತು. ಇಂದು ಎಲ್ಲಾ ಸಮುದಾಯದ ಮುಖಂಡರು ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ದೇವಾಲಯದ ಬೀಗ ತೆರೆದು ಒಳ ಪ್ರವೇಶಿಸಿ ಗ್ರಾಮದ ದೇವತೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಯಿತು. ತಹಶೀಲ್ದಾರ್ ಮಹೇಶ್ ಕುಮಾರ್ ರವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.