ಚಾಮರಾಜನಗರ ತಾಲೂಕಿಗೆ ಕನ್ನಡ ಸಾಹಿತ್ಯ ಸಮ್ಮೇಳನ ರಥ ಆಗಮನ : ಸಂಭ್ರಮದ ಸ್ವಾಗತ

ಚಾಮರಾಜನಗರ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಇಂದು ಚಾಮರಾಜನಗರ ತಾಲೂಕಿಗೆ ಪ್ರವೇಶಿಸಿತು.
ಯಳಂದೂರು ತಾಲೂಕಿನಿಂದ ಹೊರಟ ಕನ್ನಡ ಸಾಹಿತ್ಯ ಸಮ್ಮೇಳನ ರಥವನ್ನು ಮೆಲ್ಲಹಳ್ಳಿ ಗೇಟ್ ಬಳಿ ಚಾಮರಾಜನಗರ ತಾಲೂಕು ತಹಶೀಲ್ದಾರ್ ಗಿರಿಜಾ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಲಿಂಗರಾಜು, ಇನ್ನಿತರರು ಸಡಗರದಿಂದ ಬರ ಮಾಡಿಕೊಂಡರು. ಈ ವೇಳೆ ಯಳಂದೂರು ತಹಶೀಲ್ದಾರ್ ಜಯಪ್ರಕಾಶ್, ಇತರೆ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ರಥವನ್ನು ಬೀಳ್ಕೊಟ್ಟರು. ಬಳಿಕ ಚಾಮರಾಜನಗರ ಪಟ್ಟಣಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ರಥ ಆಗಮಿಸುತ್ತಿದ್ದಂತೆ ಸಂತೇಮರಹಳ್ಳಿ ವೃತ್ತದ ಹತ್ತಿರದ ಆದಿಶಕ್ತಿ ದೇವಾಲಯದ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಗರಸಭೆ ಅಧ್ಯಕ್ಷರಾದ ಸುರೇಶ್, ಉಪಾಧ್ಯಕ್ಷರಾದ ಮಮತ ಬಾಲಸುಬ್ರಹ್ಮಣ್ಯ, ಸದಸ್ಯರಾದ ಚಂದ್ರಶೇಖರ್, ತಹಶೀಲ್ದಾರ್ ಗಿರಿಜಾ, ನಗರಸಭೆ ಪೌರಾಯುಕ್ತರಾದ ಎಸ್.ವಿ. ರಾಮದಾಸ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶೈಲಕುಮಾರ್, ತಾಲೂಕು ಅಧ್ಯಕ್ಷರಾದ ಸುರೇಶ್ ಋಗ್ವೇದಿ, ನಗರಸಭೆ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಇನ್ನಿತರ ಅಧಿಕಾರಿಗಳು ಸಮ್ಮೇಳನ ರಥವನ್ನು ಬರಮಾಡಿಕೊಂಡರು. ಚಾಮರಾಜೇಶ್ವರ ದೇವಾಲಯದ ಬಳಿ ಆಗಮಿಸಿದ ಕನ್ನಡ ಸಾಹಿತ್ಯ ಸಮ್ಮೇಳನ ರಥವನ್ನು ಕನ್ನಡಪರ ಸಂಘಟನೆಗಳ ಮುಖಂಡರಾದ ಚಾ.ರಂ. ಶ್ರೀನಿವಾಸಗೌಡ, ಚಾ.ಗು. ನಾಗರಾಜು, ಪಣ್ಯದಹುಂಡಿ ರಾಜು, ಚಾ.ವೆಂ. ರಾಜಗೋಪಾಲ್, ಮಾಂಬಳ್ಳಿ ಅರುಣ್ ಕುಮಾರ್, ಇನ್ನಿತರರು ಅದ್ದೂರಿಯಾಗಿ ಸ್ವಾಗತಿಸಿದರು.