ಯಾವತ್ತಿದ್ದರೂ ರಾಜ್ಯ ಬಿಜೆಪಿ ಪಾಲಿಗೆ ‘ಯತ್ನಾಳ್’ ಬಿಸಿ ತುಪ್ಪವೇ..?

ಬೆಂಗಳೂರು: ಡಿಸೆಂಬರ್ 05: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಸಿಡಿದೆದ್ದಿರುವ ಶಾಸಕ ಬಸವನಗೌಡ ಯತ್ನಾಳ್ ಅವರಿಗೆ ಈಗಾಗಲೇ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದೆ. ಅದರ ಜೊತೆಗೆ ವಿಜಯೇಂದ್ರ ಬಣದ ನಾಯಕರು ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲೇ ಬೇಕೆಂದು ಹಠಕ್ಕೆ ಬಿದ್ದಿದ್ದಾರೆ.
ಇನ್ನೊಂದೆಡೆ ಪಕ್ಷದಲ್ಲಿ ತಟಸ್ಥರಾಗಿ ಉಳಿದಿರುವ ಕೆಲವು ನಾಯಕರು ಯಾರನ್ನೂ ಉಚ್ಛಾಟನೆ ಮಾಡುವುದು ಬೇಡ, ಅದು ಈಗಿನ ಸಮಸ್ಯೆಗೆ ಪರಿಹಾರವಾಗಲಾರದು. ಆದ್ದರಿಂದ ಎಲ್ಲರನ್ನು ಒಂದಾಗಿಸಿಕೊಂಡು ಪಕ್ಷ ಸಂಘಟಿಸೋಣ ಎಂಬ ಅಭಿಪ್ರಾಯವನ್ನು ಮುಂದಿಡುತ್ತಿದ್ದಾರೆ.
ಒಂದು ವೇಳೆ ಬಸವನಗೌಡ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರೆ ಅದರಿಂದ ಯಾವ ರೀತಿಯ ಪ್ರಯೋಜನವಾಗಲಾರದು ಏಕೆಂದರೆ ಉಚ್ಛಾಟನೆ ಶಿಕ್ಷೆ ಯತ್ನಾಳ್ ಗೆ ಹೊಸತೇನಲ್ಲ. ಈ ಹಿಂದೆಯೇ ಅವರು ಪಕ್ಷವನ್ನು ಬಿಟ್ಟು ಹೋದವರೇ.. ಹಾಗೆಯೇ ಅವರನ್ನು ಮತ್ತೆ ಪಕ್ಷಕ್ಕೆ ಕರೆತಂದವರು ಬಿ.ಎಸ್.ಯಡಿಯೂರಪ್ಪನವರೇ.. ಆದರೀಗ ಯಡಿಯೂರಪ್ಪನವರೇ ಅವರ ಶತ್ರುಗಳಾಗಿರುವುದು ವಿಪರ್ಯಾಸವೇ ಸರಿ. ಯತ್ನಾಳ್ ಅವರ ಅಸಮಾಧಾನಕ್ಕೆ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡಿಲ್ಲ ಎಂಬುದೇ ಕಾರಣವಾಗಿದೆ. ಇಂತಹ ಅಸಮಾಧಾನ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್, ಜೆಡಿಎಸ್ ನಲ್ಲಿಯೂ ಇದೆ.
ಹಾಗೆನೋಡಿದರೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳಲ್ಲಿಯೂ ಬಣಬಡಿದಾಟವಿದೆಯಾದರೂ ಅದನ್ನು ಪಕ್ಷದ ವೇದಿಕೆಯಿಂದ ಆಚೆ ತಂದು ರಾಡಿ ಮಾಡಿಕೊಳ್ಳುತ್ತಿರುವುದು ಬಿಜೆಪಿ ಮಾತ್ರ. ಶಿಸ್ತಿನ ಪಕ್ಷವೆಂದು ಬೆನ್ನುತಟ್ಟಿಕೊಳ್ಳುತ್ತಲೇ ಬರುತ್ತಿರುವ ಕಮಲ ನಾಯಕರು ಇದೀಗ ನೇರನೇರವಾಗಿ ಸಮರಕ್ಕಿಳಿದಿದ್ದಾರೆ. ಸದ್ಯ ವಿಜಯೇಂದ್ರ ಮತ್ತು ಯತ್ನಾಳ್ ಬಣಗಳಲ್ಲಿ ಕೆಲವರು ಕಾಣಿಸಿಕೊಂಡರೆ ಮತ್ತೆ ಕೆಲವರು ತಟಸ್ಥರಾಗಿದ್ದಾರೆ. ಆದರೆ ಏನೇ ಆದರೂ ಅಂತಿಮವಾಗಿ ಪರಿಣಾಮ ಬೀರುವುದು ಪಕ್ಷಕ್ಕೆ ಎಂಬುದಂತು ನಿಜ.
ಅವತ್ತು ಹಿಂದೂ ಪರ ನಿಂತವರು ಯತ್ನಾಳ್
ಕೇಂದ್ರದಲ್ಲಿ ಆಡಳಿತವನ್ನು ಹೊಂದಿ ಹಲವು ರಾಜ್ಯಗಳಲ್ಲಿ ಅಧಿಕಾರ ಪಡೆದಿರುವ ಬಿಜೆಪಿಗೆ ರಾಜ್ಯದಲ್ಲಿ ಇಂತಹದೊಂದು ಶೋಚನೀಯ ಪರಿಸ್ಥಿತಿ ಬಂದಿದೆ ಎಂದರೆ ಅದನ್ನು ಒಪ್ಪಿಕೊಳ್ಳುವುದಕ್ಕೆ ಮುಖಂಡರು, ಪಕ್ಷದ ಮತ್ತು ಹಿಂದೂಸಂಘಟನೆಯ ಕಾರ್ಯಕರ್ತರಿಗೆ ಕಷ್ಟವಾಗುತ್ತಿದೆ. ಅಸಲಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಹಿಂದೂ ಕಾರ್ಯಕರ್ತರು ಸಾವನ್ನಪ್ಪಬೇಕಾಗಿ ಬಂದಿತ್ತು. ಇದು ಅವತ್ತಿನ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಇತರೆ ಪಕ್ಷದ ನಾಯಕರ ವಿರುದ್ಧ ಹಿಂದೂಪರ ಸಂಘಟನೆಗಳು ತಿರುಗಿ ಬೀಳುವಂತಾಗಿತ್ತು.

ಅವತ್ತಿನ ದಿನಗಳಲ್ಲಿ ಹಿಂದೂಪರವಾಗಿ ಮತ್ತು ತಮ್ಮದೇ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ವಿರುದ್ಧ ಟೀಕೆಗಳನ್ನು ಮಾಡಿದ್ದರೆ ಅದು ಶಾಸಕ ಬಸವನಗೌಡ ಯತ್ನಾಳ್ ಮಾತ್ರ. ಉಳಿದಂತೆ ಅಂದಿನ ಸಂಸದರಾಗಿದ್ದ ಪ್ರತಾಪ್ ಸಿಂಹ ಕೂಡ ಧ್ವನಿ ಎತ್ತಿದ್ದರು. ಆದರೆ ಹಿಂದೂಪರ ಸಂಘಟನೆಗಳ ಸಹಕಾರದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದೂ ಸಂಘಟನೆಗಳ ಪರವಾಗಿ ನಿಂತಿಲ್ಲ ಎಂಬ ಅಸಮಾಧಾನಗಳಿದ್ದವು. ಅದರ ಪರಿಣಾಮಗಳು ಏನಾಯಿತು ಎಂಬುದು 2023ರ ವಿಧಾನಸಭಾ ಚುನಾವಣೆಯಲ್ಲಿ ಗೊತ್ತಾಗಿದೆ.
ಯತ್ನಾಳ್ಗೆ ಪಕ್ಷದಿಂದ ಉಚ್ಛಾಟನೆ ಹೊಸದಲ್ಲ
ವಿರೋಧಪಕ್ಷದಲ್ಲಿ ಕುಳಿತಿರುವ ಬಿಜೆಪಿ ನಾಯಕರು ಇವತ್ತು ಒಗ್ಗಟ್ಟಾಗಿ ಆಡಳಿತರೂಢ ಕಾಂಗ್ರೆಸ್ ನ್ನು ಎದುರಿಸಬೇಕಾಗಿತ್ತು. ಆದರೆ ಪಕ್ಷದೊಳಗೆ ನಾಯಕರಲ್ಲಿರುವ ಅಸಮಾಧಾನ ಭುಗಿಲೆದ್ದಿದ್ದು ಬಣಗಳಾಗಿ ಪರಿವರ್ತನೆಗೊಂಡಿವೆ. ಅಷ್ಟೇ ಅಲ್ಲದೆ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಸಿಡಿದೇಳುವಂತೆ ಮಾಡಿದೆ. ಯತ್ನಾಳ್ ಅವರ ಕಟುವಾದ ಟೀಕೆಗಳು ಯಡಿಯೂರಪ್ಪರವರ ಕುಟುಂಬದ ವಿರುದ್ಧವೇ ಆಗಿದ್ದರೂ ಪರಿಣಾಮ ಮಾತ್ರ ಪಕ್ಷದ ಮೇಲೆ ಆಗುತ್ತಿದೆ. ಹೀಗಾಗಿ ಪಕ್ಷದ ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರಿಗೆ ತೊಂದರೆಯಾಗುತ್ತಿದೆ.ಒಂದು ವೇಳೆ ಬಸವನಗೌಡ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದರೆ ಅವರೊಂದಿಗೆ ಒಂದಷ್ಟು ಶಾಸಕರು, ಸಂಸದರು ಸೇರಿದಂತೆ ನಾಯಕರಿದ್ದಾರೆ. ಹೀಗಾಗಿ ಅವರು ಬಿಜೆಪಿಗೆ ಸೆಡ್ಡು ಹೊಡೆದರ ಪರಿಣಾಮ ಪಕ್ಷದ ಮೇಲೆಯೇ ಆಗುತ್ತದೆ. ಹೀಗಾಗಿ ಹೈಕಮಾಂಡ್ ತೂಗಿ ಅಳೆದು ನೋಡುತ್ತಿದೆ. ಇನ್ನು ಯತ್ನಾಳ್ ಅವರನ್ನು ಮಾತಾಡದಂತೆ ಕಟ್ಟಿ ಹಾಕುವುದು ಸುಲಭವಲ್ಲ. ಹೀಗಾಗಿ ಅವರನ್ನು ಹೇಗೆ ನಿಭಾಯಿಸಬೇಕೆಂಬುದು ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಈ ಹಿಂದೆಯೂ ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆಯಾಗಿದ್ದರು ಅವರಿಗೆ ಅದೇನು ಹೊಸತಲ್ಲ.

ಯತ್ನಾಳ್ ಸ್ವಪಕ್ಷದರನ್ನು ಟೀಕಿಸಿದ್ದೇ ಜಾಸ್ತಿ
ಬಿಜೆಪಿಯಿಂದ ಉಚ್ಛಾಟನೆಗೊಂಡು ಹೊರ ಹೋಗಿದ್ದ ಯತ್ನಾಳ್ ರನ್ನು ಹಲವರ ವಿರೋಧಗಳ ನಡುವೆಯೇ 2018ರಲ್ಲಿ ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು. ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಜತೆ ಬಸವರಾಜ ಪಾಟೀಲ್ ಅನ್ವರಿ, ಮಾಜಿ ಶಾಸಕ ನಾಗಪ್ಪ ಸಾಲೋನಿ, ಮಾಜಿ ಸಂಸದ ಮಲ್ಲಿಕಾರ್ಜುನ ಖೂಬಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತು. ಅದಕ್ಕೂ ಮೊದಲು ಬಿಜೆಪಿಯಲ್ಲಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜವಳಿ ಖಾತೆ ಸಚಿವರಾಗಿದ್ದರು.
ಆದಾದ ನಂತರದ ಬೆಳವಣಿಗೆಗಳಿಂದ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. 2013ರ ಚುನಾವಣೆ ನಂತರ ಯತ್ನಾಳ್ ಬಿಜೆಪಿಗೆ ಮರಳಿದ್ದರು. ಆದರೆ, 2015ರಲ್ಲಿ ನಡೆದ ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ಇದಕ್ಕಾಗಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿತ್ತು. ಮತ್ತೆ 2018ರಲ್ಲಿ ಬಿಜೆಪಿಗೆ ಸೇರ್ಪಡೆಗೊಳಿಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಬಿಜೆಪಿಯಲ್ಲಿರುವ ಯತ್ನಾಳ್ ಕಳೆದ ಐದಾರು ವರ್ಷಗಳಲ್ಲಿ ವಿರೋಧಪಕ್ಷಕ್ಕಿಂತ ಹೆಚ್ಚಾಗಿ ಸ್ವಪಕ್ಷದವರನ್ನು ಟೀಕಿಸಿರುವುದೇ ಹೆಚ್ಚು. ಈಗಿನ ಪರಿಸ್ಥಿತಿಯಲ್ಲಿ ಯತ್ನಾಳ್ ಬಿಜೆಪಿ ಪಾಲಿಗೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿತುಪ್ಪ ಎಂದರೆ ತಪ್ಪಾಗಲಾರದು.
ಸ್ಪೆಶಲ್ ಡೆಸ್ಕ್ tv8news kannada ಬೆಂಗಳೂರು
Source: www.tv8kannada.in