ಶಿವಾಜಿ ಮಹಾರಾಜ್ ಬಯೋಪಿಕ್ ನಲ್ಲಿ ರಿಷಬ್ ಶೆಟ್ಟಿ ನಟನೆ: ಅಸಮಾಧಾನ ವ್ಯಕ್ತಪಡಿಸಿದ ಫ್ಯಾನ್ಸ್

ಕಾಂತಾರ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟ ರಿಷಬ್ ಶೆಟ್ಟಿ ದೇಶ, ವಿದೇಶದಲ್ಲೂ ಸದ್ದು ಮಾಡ್ತಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ರಿಷಬ್ ಶೆಟ್ಟಿ ಈ ಮಧ್ಯೆ ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್ನಲ್ಲಿ ನಟಿಸೋದಾಗಿ ಅನೌನ್ಸ್ ಮಾಡಿದ್ದಾರೆ.
ಈ ಬೆನ್ನಲ್ಲೇ ಈ ಬಗ್ಗೆ ತೀವ್ರ ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ.ಭಾರತದ ಮಹಾನ್ ಯೋಧ, ರಾಜ ಶಿವಾಜಿಯ ಜೀವನಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆಮೇಲೆ ಅದ್ಭುತ ಆಯಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ರಿಷಬ್ ಸಿನಿಮಾ ಪೋಸ್ಟರ್ ಹಂಚಿಕೊಂಡ ಬೆನ್ನಲ್ಲೇ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಿಷಬ್ ಶೆಟ್ಟಿ ಅವರೇ, ನಮ್ಮ ಕುಂದಾಪುರದ ಬಸ್ರೂರು ಒಂದು ಕಾಲದಲ್ಲಿ ಪ್ರಮುಖ ಒಳನಾಡ ಬಂದರಾಗಿತ್ತು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಬಸ್ರೂರರನ್ನು , ಕುಮಟಾ ವನ್ನು ಶಿವಾಜಿ ಮತ್ತು ಆತನ ಸೇನೆ ಲೂಟಿ ಮಾಡಿತ್ತು, ಅಪಾರವಾದ ಹತ್ಯೆ ಕೂಡ ಮಾಡಿತ್ತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ. ಅದೂ ಕೂಡ ಮಹಾ ಶಿವರಾತ್ರಿಯ ದಿನ. ನಮ್ಮೂರಿನ ಭೂತ, ಕೋಲವನ್ನು ಜಗತ್ಪçಸಿದ್ಧ ಮಾಡಿದವರು ನೀವು. ನಮ್ಮ ಹಿರಿಯರನ್ನು ದಂಡಿಸಿ, ಲೂಟಿ ಮಾಡಿದವರನ್ನು ನೀವು ವಿಜೃಂಭಿಸುವುದು ಸರಿಯೇ? ಹೇಳಲು ಹತ್ತಾರು ಕತೆಗಳಿವೆ. ಕನ್ನಡ ನಾಡಿನ ರಾಜರದ್ದೇ ಕತೆಗಳು ನೂರಾರು ಇವೆ. ಒಮ್ಮೆ ಯೋಚಿಸಿ ಎಂದು ಅಭಿಮಾನಿಯೊಬ್ಬ ಎಕ್ಸ್ನಲ್ಲಿ ರಿಷಬ್ಗೆ ಪ್ರಶ್ನಿಸಿದ್ದಾರೆ.
ಕರ್ನಾಟಕದ ಪಾಲಿಗೆ ಶಿವಾಜಿ ದಾಳಿಕೋರ, ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಶಿವಾಜಿ ಮಹಾರಾಜ್ ಕುರಿತ ಈ ಸಿನಿಮಾವನ್ನು ಕೈಬಿಟ್ಟು ನಮ್ಮ ಮಣ್ಣಿನ ಕಥೆಯನ್ನು ಹೇಳಿ ಎಂದು ಸಾಕಷ್ಟು ಮಂದಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಇದುವರೆಗೂ ರಿಷಬ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬರಹ: ಪುಣ್ಯ ಗೌಡ ಫಿಲಂ ಬ್ಯೂರೋ tv8kannada ಬೆಂಗಳೂರು