CM Change: ಅಧಿಕಾರ ಹಂಚಿಕೆ ಸೂತ್ರ ನಿಜ ಎಂದ ಡಿ ಕೆ ಶಿವಕುಮಾರ್: ಹಾಗಾದ್ರೆ ಸಿದ್ದರಾಮಯ್ಯ ಕೆಳಗಿಳಿಯುವುದು ಫಿಕ್ಸಾ?

ಬೆಂಗಳೂರು ಡಿಸೆಂಬರ್ 04: ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಸರ್ಕಾರ ರಚನೆಯ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಲೆಕ್ಕಾಚಾರವಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದು, ಎರಡುವರೆ ವರ್ಷದ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಯುತ್ತಾರಾ ಎನ್ನುವ ಅನುಮಾನ ಶುರುವಾಗಿದೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಆದರೆ, ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿದೆ. ಅದನ್ನು ಈಗ ಬಹಿರಂಗಪಡಿಸಲಾಗದು ಎಂದು ಹೇಳುವ ಮೂಲಕ ಅಧಿಕಾರ ಹಸ್ತಾಂತರ ಕುರಿತು ವದಂತಿಗಳಿಗೆ ಮತ್ತೆ ಇಂಬು ನೀಡಿದ್ದಾರೆ.
ನಾನು ಮುಖ್ಯಮಂತ್ರಿ ಹುದ್ದೆ ಕುರಿತು ಸದ್ಯಕ್ಕೆ ಚರ್ಚೆ ಮಾಡುವುದಿಲ್ಲ. ನಾನೀಗ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ವಿಲ್ಲ. ಆದರೆ ಅಧಿಕಾರಕ್ಕೆ ಸಂಬಂಧಿಸಿ ಒಪ್ಪಂದವಾಗಿದ್ದು, ಅದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ, ಆ ಕುರಿತು ಸಮಯ ಬಂದಾಗ ಹೇಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ನನ್ನ ಸಂಪುಟ ಸಹದ್ಯೋಗಿಗಳಿಗೆ ಅಧಿಕಾರದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ತಿಳಿಸಿದ್ದೇನೆ. ಆದರೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಿಗೆ ಒಳ್ಳೆಯದಾಗಲಿ ಎಂದಷ್ಟೇ ಬಯಸುತ್ತೇನೆ. ಅಲ್ಲದೆ ಎಲ್ಲ ಹೇಳಿಕೆ ಸೇರಿ ಇನ್ನಿತರ ವಿಚಾರಗಳನ್ನು ಪಕ್ಷ ನಿಭಾಯಿಸುತ್ತದೆ ಎಂದು ಹೇಳಿದರು.
ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಉತ್ತಮ ಸಂಬಂಧ ಇದೆ. ನಾನು ಅಧಿಕಾರಕ್ಕಾಗಿ ಯಾವತ್ತೂ ಪಕ್ಷದ ಅಥವಾ ನಮ್ಮ ನಾಯಕರ ವಿರುದ್ದ ಮಾತನಾಡಿದವನಲ್ಲ. ರಾಜ್ಯ ಮತ್ತು ಪಕ್ಷ ಏನು ಬಯಸುತ್ತದೆ ಎಂಬುದು ನನಗೆ ತಿಳಿದಿದೆ. ಅದರಂತೆ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉತ್ತಮ ಸಂಬಂಧವಿದ್ದು, ಆಡಳಿತಾತ್ಮಕವಾಗಿ ನನ್ನ ಸಲಹೆಗಳನ್ನು ಕೇಳಿ, ಚರ್ಚಿಸುತ್ತಾರೆ.
ನಾನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯನ್ನು ಕೇಳಿ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರಿಗೆ ಹೃದಯಪೂರ್ವಕವಾಗಿ ಬೆಂಬಲ ನೀಡುತ್ತಿದ್ದೇನೆ. ನಮ್ಮ ರಾಜಕೀಯ ಸ್ಥಾನಮಾನಗಳ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ನಾನು ಯಾವತ್ತೂ ನಮ್ಮ ನಾಯಕರನ್ನು ಬೆದರಿಸುವ ಕೆಲಸಕ್ಕೆ ಹೋಗುವುದಿಲ್ಲ. ನಾನು ಕುಟುಂಬದವರನ್ನು ಅತಿಯಾಗಿ ಪ್ರೀತಿಸುತ್ತೇನೆ ಎಂದು ಹೇಳಿದರು.
ಗಾಂಧಿ ಕುಟುಂಬಕ್ಕೆ ನನ್ನ ತಲೆಬಾಗುತ್ತದೆ. ನನ್ನ ನಿಷ್ಠೆಗೆ ಮುಂದೆ ಬಹುಮಾನ ಸಿಗುತ್ತದೆ ಎಂಬ ನಂಬಿಕೆಯಿದೆ. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯಿಂದ ಬೆಲೆ ಏರಿಕೆ ಸೇರಿಜನರ ಸಮಸ್ಯೆ ಅರಿವಿಗೆ ಬಂತು. ಅಲ್ಲಿಂದಲೇ ಗ್ಯಾರಂಟಿ ಯೋಜನೆಗಳ ಪರಿಕಲ್ಪನೆ ಹುಟ್ಟಿಕೊಂಡಿತು. ಜನರ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ಹುದ್ದೆ ಕುರಿತು ಸಚಿವ ಸಂಪುಟದ ಸಚಿವರ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ. ಕೆ.ಶಿವಕುಮಾರ್, ನನ್ನ ಸಂಪುಟ ಸಹದ್ಯೋಗಿಗಳಿಗೆ ಅಧಿಕಾರದ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ತಿಳಿಸಿದ್ದೇನೆ. ಆದರೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಿಗೆ ಒಳ್ಳೆಯದಾಗಲಿ ಎಂದಷ್ಟೇ ಬಯಸುತ್ತೇನೆ. ಅಲ್ಲದೆ ಎಲ್ಲ ಹೇಳಿಕೆ ಸೇರಿ ಇನ್ನಿತರ ವಿಚಾರಗಳನ್ನು ಪಕ್ಷ ನಿಭಾಯಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.