ಕಾಂಗ್ರೆಸ್ನ ಗ್ಯಾರಂಟಿ, ಅಭಿವೃದ್ಧಿಯಿಂದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಜಯ : ಸತೀಶ ಜಾರಕಿಹೊಳಿ

ಬೆಳಗಾವಿ: ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳಿಂದಾಗಿ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಸಹೋದ್ಯೋಗಿಗಳು, ಕಾಂಗ್ರೆಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವಿಗೆ ಶ್ರಮಿಸಿದರು. ಹಾಗಾಗಿ ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದ ಕ್ಷೇತ್ರವನ್ನು ನಮ್ಮ ತೆಕ್ಕೆಗೆ ಪಡೆದೆವು’ ಎಂದು ಹೇಳಿದರು.
ಪ್ರತಿ ಚುನಾವಣೆಯಲ್ಲಿ ಧಾರ್ಮಿಕ ಭಾವನೆ ಇಟ್ಟುಕೊಂಡು ಬಿಜೆಪಿಯವರು ಗೆಲ್ಲುತ್ತಿದ್ದರು. ಈ ಬಾರಿ ಅದಕ್ಕೆ ಅವಕಾಶ ನೀಡಲಿಲ್ಲ. ಈ ಹಿಂದೆ ಅಹಿಂದ ಮತದಾರರು ಬಿಜೆಪಿ ಜತೆ ಹೋಗುತ್ತಿದ್ದರು. ಈ ಬಾರಿ ನಾವು ಮಾಡಿದ ತಂತ್ರಗಾರಿಕೆಯಿಂದ ಶೇ 70ರಷ್ಟು ಅಹಿಂದ ಮತಗಳು ಕಾಂಗ್ರೆಸ್‌ನತ್ತ ವಾಲಿದವು. ಹಾಗಾಗಿ ಅಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದು ತಿಳಿಸಿದರು.