ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಶೌಚಾಲಯ ಉದ್ಘಾಟನೆ

ನಂಜನಗೂಡು: ತಾಲ್ಲೂಕಿನ ದೇವನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಹೈಟೆಕ್ ಶೌಚಾಲಯವನ್ನು ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀನಿವಾಸ್ ಸರ್ವೀಸಸ್ ಟ್ರಸ್ಟ್ ಮತ್ತು ಟಿವಿಎಸ್ ಕಂಪನಿ ವತಿಯಿಂದ ಸುಮಾರು 7.90 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದ್ದು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ..
ಆಸ್ಪತ್ರೆಗೆ ಆಗಮಿಸುವ ಒಳ ಮತ್ತು ಹೊರ ರೋಗಿಗಳಿಗೆ ಹಾಗೂ ಅಂಗವಿಕಲರಿಗೆ, ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಲಾಗಿದೆ. ರೋಗಿಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಟಿವಿಎಸ್ ಕಂಪನಿಯಿಂದ ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರಿ ಶಾಲೆ ಮತ್ತು ಆಸ್ಪತ್ರೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸುವಲ್ಲಿ ಮುಂದಾಗಿದ್ದಾರೆ ಇವರ ಕೆಲಸ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ ನಾಗೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ.ಸುದೀಂದ್ರ, ಗ್ರಾಪಂ ಸದಸ್ಯರಾದ ಅವಿನಾಶ್, ಪದ್ಮ, ಮಂಜುಳಾ, ಟಿವಿಎಸ್ ಕಂಪನಿಯ ಕ್ಷೇತ್ರ ನಿರ್ದೇಶಕ ಶಶಿಕಾಂತ್, ಸಮುದಾಯ ಅಧಿಕಾರಿಗಳಾದ ಮಹದೇವಸ್ವಾಮಿ, ಮಹದೇವಪ್ರಸಾದ್, ಮುಖಂಡರಾದ ಪ್ರಭುಸ್ವಾಮಿ, ಸೋಮಶೇಖರ್, ದೊಡ್ಡನಾಗಪ್ಪ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.