ಸುದ್ದಿ

ಮಲೆ ಮಹದೇಶ್ವರ ಬೆಟ್ಟದಲ್ಲಿ ವೈಜ್ಞಾನಿಕ ಸಮಗ್ರ ತ್ಯಾಜ್ಯ ನಿರ್ವಹಣೆಯ ‘ಹಸಿರು ಮಲೆ ಮಹದೇಶ್ವರ ಬೆಟ್ಟ’ ನೂತನ ಯೋಜನೆ : ತ್ರಿಪಕ್ಷೀಯ ಒಡಂಬಡಿಕೆ

ಚಾಮರಾಜನಗರ: ಪ್ರಸಿದ್ದ ಯಾತ್ರಾ ಕ್ಷೇತ್ರ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 3 ವರ್ಷಗಳ ಅವಧಿಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆಯ ಉದ್ದೇಶದ ಸಲುವಾಗಿ ‘ಹಸಿರು ನಾಳೆ, ಮಲೆ ಮಹದೇಶ್ವರ ಬೆಟ್ಟ’ ಎಂಬ ಮಹತ್ತರ ಯೋಜನೆ ಅನುಷ್ಠಾನಕ್ಕಾಗಿ ತ್ರಿಪಕ್ಷೀಯ ಒಡಂಬಂಡಿಕೆಯನ್ನು ಇಂದು ಮಾಡಿಕೊಳ್ಳಲಾಯಿತು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆ ಉಪಾಧ್ಯಕ್ಷ ತ.ಮ. ವಿಜಯ ಭಾಸ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್ ಅವರ ಸಮ್ಮುಖದಲ್ಲಿ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎ.ಇ. ರಘು, ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಪ್ ಉಲ್ ಹಸನ್ ಹಾಗೂ ಮಲೆ ಮಹದೇಶ್ವರ ಬೆಟ್ಟ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಕಿರಣ್ ಅವರು ಯೋಜನೆ ಅನುಷ್ಠಾನದ ಒಪ್ಪಂದಕ್ಕೆ ಸಹಿ ಹಾಕಿದರು.


ಹಸಿರು ನಾಳೆ, ಮಲೆ ಮಹದೇಶ್ವರ ಬೆಟ್ಟ ಯೋಜನೆಯು 3 ವರ್ಷಗಳದಾಗಿದ್ದು, ತ್ಯಾಜ್ಯ ನಿರ್ವಹಣೆಯ ಎಲ್ಲ ವಿಭಾಗಗಳಲ್ಲಿ ಸಮರ್ಪಕವಾಗಿ ಯೋಜನೆ ಅನುಷ್ಠಾನವಾಗಲಿದೆ. ಎಲ್.ಐ.ಸಿ ಹೆಚ್.ಎಫ್.ಎಲ್. ಸಂಸ್ಥೆಯು ಯೋಜನೆಗೆ ಅಗತ್ಯವಾದ ಅನುದಾನದ ನೆರವು ನೀಡಲಿದ್ದು, ಮೈಕಾಪ್ಸ್ ಸಂಸ್ಥೆಯು ಯೋಜನೆ ಅನುಷ್ಠಾನ ನಿರ್ವಹಣೆ ಹೊತ್ತಿದೆ. ಬೆಟ್ಟವನ್ನು ಹಸಿರುಮಯವಾಗಿಸುವ ಖಾತರಿಯೊಂದಿಗೆ ಅಗತ್ಯವಿರುವ ಸಮಗ್ರ ತ್ಯಾಜ್ಯ ನಿರ್ವಹಣೆ ಯೋಜನೆ, ತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನ ಸುಸ್ಥಿರಗೊಳಿಸುವ, ತ್ಯಾಜ್ಯ ಸಂಗ್ರಹಣೆಯಿಂದ ಬರುವ ಆದಾಯವನ್ನು ಸ್ಥಳೀಯವಾಗಿ ನೀಡುವುದೂ ಸೇರಿದಂತೆ ಒಟ್ಟಾರೆ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ.


ಮೈಕಾಪ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ತ.ಮ. ವಿಜಯ ಭಾಸ್ಕರ್ ಅವರು ಮಾತನಾಡಿದರು. ಪ್ರಸ್ತುತ ಮಲೆ ಮಹದೇಶ್ವರ ಬೆಟ್ಟದಲ್ಲಿ ಅನುಷ್ಠಾನ ಮಾಡಲಿರುವ ಮಹತ್ವದ ಹಸಿರು ಯೋಜನೆಯನ್ನು ಜಿಲ್ಲಾಡಳಿತ, ಜಿ.ಪಂ, ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಸಮನ್ವಯ ಸಹಕಾರದೊಂದಿಗೆ ಯಶಸ್ವಿಯಾಗಿ ಮಾಡೋಣ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಬದ್ದತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಉಪಾಧ್ಯಕ್ಷರಾದ ತ.ಮ. ವಿಜಯ ಭಾಸ್ಕರ್ ಅವರು ತಿಳಿಸಿದರು.

  ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳು ಅಲ್ಲದೇ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತಾಧಿಗಳು ಬರುತ್ತಿದ್ದಾರೆ. ಜಾತ್ರಾ ಸಂದರ್ಭದಲ್ಲೂ ತ್ಯಾಜ್ಯ ನಿರ್ವಹಣೆ ಬಹು ಸವಾಲಿನ ಕಾರ್ಯವಾಗಿದೆ. ಇದೀಗ ಮೈ ಕಾಪ್ಸ್ ಸಂಸ್ಥೆಯು ತ್ಯಾಜ್ಯ ನಿರ್ವಹಣೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಅತ್ಯಂತ ಅಭಿನಂದನೀಯ ಹಾಗೂ ಉಪಯೋಗಿ ಕಾರ್ಯವಾಗಿದೆ ಎಂದರು.ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರದಲ್ಲಿ ಅತ್ಯಂತ ಯೋಜಿತ ಹಾಗೂ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವುದು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಯೋಜನೆ ಕಾರ್ಯಗತಗೊಳಿಸಲು ತ್ರಿಪಕ್ಷೀಯ ಒಪ್ಪಂದವು ಸರಿಯಾದ ಸಮಯಕ್ಕೆ ಆಗಿದೆ. ಜಿಲ್ಲಾಡಳಿತವು ಪ್ರಾಧಿಕಾರ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟ ಎಂಬ ಕಾರ್ಯವನ್ನು ರೂಪಿಸಿದ್ದು, ಈ ದಿಸೆಯಲ್ಲಿ ಮುಂದಾಗಿದ್ದೆವು. ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಮೂರು ವರ್ಷಗಳ ನೂತನ ಯೋಜನೆಯಿಂದ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಮೋನಾ ರೋತ್, ಮುಖ್ಯ ಯೋಜನಾಧಿಕಾರಿ ಕಿರಣ್ ಪಡ್ನೇಕರ್, ಮೈಕಾಪ್ಸ್ ಸಂಸ್ಥೆಯ ಕೆ.ಎಸ್.ವಿಶ್ವ ಕಿರಣ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button