
ಸಂಸದ ತೇಜಸ್ವಿ ಸೂರ್ಯ ಸೇರಿ ಕನ್ನಡದ ಕನ್ನಡ ದುನಿಯಾ ಚಾನೆಲ್ ಸಂಪಾದಕರ ವಿರುದ್ಧ ಎಫ್ಐಆರ್ ದಾಖಲಾಗಿದೆ,
ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಹಾವೇರಿಯ ಸಿಇಎನ್ ಠಾಣೆಯಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈತ ರುದ್ರಪ್ಪ ಆತ್ಮಹತ್ಯೆಗೆ ವಕ್ಫ್ ನೋಟಿಸ್ ಕಾರಣ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
ಆದರೆ, ಜಿಲ್ಲಾಡಳಿತ ಮತ್ತು ಪೊಲೀಸರು ಸಾಲಬಾಧೆಯೇ ಆತ್ಮಹತ್ಯೆಗೆ ಕಾರಣ ಎಂದು ಸ್ಪಷ್ಟಪಡಿಸಿದ್ದವು.
ಹಾವೇರಿ, ನವೆಂಬರ್ 8: ರೈತರೊಬ್ಬರ ಆತ್ಮಹತ್ಯೆ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ, ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ವಕ್ಫ್ ನೋಟಿಸ್ ಬಂದಿದ್ದೇ ಆತ್ಮಹತ್ಯೆಗೆ ಕಾರಣ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
ಹರನಗೇರಿ ರೈತ ರುದ್ರಪ್ಪ ಆತ್ಮಹತ್ಯೆ ಬಗ್ಗೆ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ವಕ್ಫ್ ನೋಟಿಸ್ಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು.
ತೇಜಸ್ವಿ ಸೂರ್ಯ ಟ್ವೀಟ್ನಲ್ಲೇನಿತ್ತು?
ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮ ವರದಿಯೊಂದನ್ನು ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ‘ಸಿಎಂ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಅವರ ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಕರ್ನಾಟಕದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರತಿ ದಿನ ಇಂಥ ಘಟನೆಗಳು ಸಂಭವಿಸುತ್ತಿವೆ’ ಎಂದು ಉಲ್ಲೇಖಿಸಿದ್ದರು. ಇದೀಗ ಈ ಟ್ವೀಟ್ ಅನ್ನು ಅಳಿಸಿಹಾಕಲಾಗಿದೆ.

ಜಿಲ್ಲಾಡಳಿತ ನೀಡಿದ್ದ ಸ್ಪಷ್ಟನೆ ಏನು?
ಆಸ್ತಿ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರುವುದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಗಳ ಬಗ್ಗೆ ನಂತರ ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿತ್ತು. ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದಕ್ಕೆ ರೈತ ಆತ್ಮಹತ್ಯೆಗೆ ಶರಣಾಗಿಲ್ಲ. ಅವರು ಸಾಲಬಾಧೆಯಿಂದ ನೊಂದಿದ್ದರು ಎಂದು ಪೊಲೀಸ್ ಇಲಾಖೆ ಹಾಗೂ ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದವು.
ಹಾವೇರಿ ಪೊಲೀಸರು ಹೇಳಿದ್ದೇನು?
ಮೃತನ ಬಗ್ಗೆ ಪಿಎಸ್‌ಐ ಆಡೂರ ಅವರು ತನಿಖೆ ಕೈಗೊಂಡು, ಆತನು ಬೆಳೆ ಹಾನಿಯಾಗಿದ್ದರಿಂದ ಸಾಲ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಅಂತಿಮ ವರದಿಯನ್ನು ತಹಶೀಲ್ದಾರ ಹಾನಗಲ್ ರವರಿಗೆ ಸಲ್ಲಿಸಿರುತ್ತಾರೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ 05 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗಿರುತ್ತದೆ ಎಂದು ಹಾವೇರಿ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದರು.
ಏತನ್ಮಧ್ಯೆ, ರುದ್ರಪ್ಪ ಕುಟುಂಬಸ್ಥರು ಗುರುವಾರ ವಕ್ಫ್ ಜಂಟಿ ಸದನ ಸಮಿತಿಯ ಅಧ್ಯಕ್ಷರಿಗೂ ಮನವಿ ಸಲ್ಲಿಸಿದ್ದರು. ವಕ್ಫ್ ಬೋರ್ಡ್ನಿಂದಾಗಿ ಅನ್ಯಾಯ ಆಗಿದೆ ಎಂದು ದೂರು ನೀಡಿದ್ದರು.