ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಪದಕ ಗೆದ್ದಿದ್ದ ಬ್ಯಾಡ್ಮಿಂಟನ್ ಪಟು ಆರ್ಎಂವಿ ಗುರುಸಾಯಿದತ್ ವೃತ್ತಿ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ನಿಂದ ಸೋಮವಾರದಂದು ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಗುರುಸಾಯಿದತ್ ಒಂದೂವರೆ ದಶಕ ಕಾಲದ ವೃತ್ತಿಪರ ಬಾಡ್ಮಿಂಟನ್ ವೃತ್ತಿ ಬದುಕು ಮುಕ್ತಾಯ ಕಾಣುತ್ತಿದೆ.
2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಹೈದರಾಬಾದ್ ಮೂಲಕದ ಗುರುಸಾಯಿದತ್ ಕಂಚು ಗೆದ್ದಿದ್ದರು. ಆದರೆ, ಗುರುಸಾಯಿದತ್ ವೃತ್ತಿ ಬದುಕಿಗೆ ಗಾಯದ ಸಮಸ್ಯೆ ಬಹುವಾಗಿ ಕಾಡಿತ್ತು. ಕಳೆದ ಕೆಲವು ವರ್ಷಗಳಿಂದ ಅನೇಕ ಬಾರಿ ಸ್ನಾಯು ಸೆಳೆತ, ಗಾಯಗಳಿಂದ ಬಳಲುತ್ತಿದ್ದ ಸಾಯಿದತ್ ಕೊನೆಗೂ ನಿವೃತ್ತಿ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. “ನನಗೆ ನನ್ನ ಸಾಮರ್ಥ್ಯದ ಶೇಕಡಾ 100 ರಷ್ಟು ನೀಡಲು ಸಾಧ್ಯವಾಗಲಿಲ್ಲ. ನಾನು ಕ್ರೀಡೆಯನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅದಕ್ಕೆ ನ್ಯಾಯ ಸಲ್ಲಿಸಲು ನನಗೆ ಸಾಧ್ಯವಾಗುತ್ತಿಲ್ಲ ದೇಹ ಆಟದ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾನು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದೆ. ಇದು ನನ್ನ ಪಾಲಿಗೆ ತುಂಬಾ ಭಾವನಾತ್ಮಕ ನಿರ್ಧಾರ,” ಎಂದು ಗುರುಸಾಯಿದತ್ ಪಿಟಿಐಗೆ ತಿಳಿಸಿದರು.
2008ರ ಕಾಮನ್ವೆಲ್ತ್ ಯೂತ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ವಿಶ್ವ ಜೂನಿಯರ್ ಕಂಚಿನ ಪದಕ ಪಡೆದಿರುವ ಗುರುಸಾಯಿದತ್ ತಮ್ಮ ಈ ಹಿಂದಿನ ಸ್ಟಾರ್ ಆಟಗಾರರಂತೆ ಬಾಡ್ಮಿಂಟನ್ ಕೋಚ್ ಆಗಿ ಹೊಸ ಪಯಣಕ್ಕೆ ಕಾಲಿಡುವುದಾಗಿ ಘೋಷಿಸಿದ್ದಾರೆ.
“ನಾನು ನಿಜವಾಗಿಯೂ ಭಾರತೀಯ ತಂಡದ ಕೋಚ್ ಆಗುವ ಅವಕಾಶವನ್ನು ಎದುರು ನೋಡುತ್ತಿದ್ದೇನೆ. ನನ್ನ ಮಾರ್ಗದರ್ಶಕರಾಗಿರುವ ಗೋಪಿ ಸರ್ ಅವರ ಅಡಿಯಲ್ಲಿ ಕೆಲಸ ಮಾಡುವುದರಿಂದ ನಾನು ಬಹಳಷ್ಟು ಕಲಿಯುತ್ತೇನೆ” ಎಂದು ಗುರುಸಾಯಿದತ್ ಹೇಳಿದರು. “ನಾನು ಇಂಡೋನೇಷ್ಯಾದಲ್ಲಿ ಭಾರತೀಯ ತಂಡದೊಂದಿಗೆ ಇರುತ್ತೇನೆ. ನನಗೆ ಅವಕಾಶವನ್ನು ನೀಡಿದ್ದಕ್ಕಾಗಿ ನಾನು BPCL ಗೆ ಕೃತಜ್ಞನಾಗಿದ್ದೇನೆ ಮತ್ತು ನಿಜವಾಗಿಯೂ ಭಾರತೀಯ ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.” ಎಂದು ಗುರುಸಾಯಿದತ್ ಹೇಳಿದರು.
2010 ರ ಇಂಡಿಯಾ ಓಪನ್ ಗ್ರ್ಯಾನ್ ಪ್ರೀನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಅವರು ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಮತ್ತು ಚಿನ್ನದ ಪದಕ ತಂಡದ ಸಹ ಆಟಗಾರ ಹಾಗೂ ವೈಯಕ್ತಿಕವಾಗಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು. 2015 ರಲ್ಲಿ ಬಲ್ಗೇರಿಯನ್ ಇಂಟರ್ನ್ಯಾಷನಲ್, 2012 ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2008ರಲ್ಲಿ ಬಹ್ರೇನ್ ಇಂಟರ್ನ್ಯಾಷನಲ್ ಟ್ರೋಫಿಯನ್ನು ಗೆದ್ದರು. 2014ರ CWGನಲ್ಲಿ ಇಂಗ್ಲೆಂಡ್ನ ರಾಜೀವ್ ಔಸೆಫ್ ರನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದಿದ್ದು ಗುರುಸಾಯಿದತ್ ಸಾಧನೆಯಾಗಿದೆ.