ಮುಂದಿನ 4 ದಿನ ವರುಣನ (ಅಸಾನಿ) ಅಬ್ಬರ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಸೈಕ್ಲೋನ್ ಆಗಿ ಪರಿವರ್ತನೆ ಆಗಲಿದ್ದು, ಕಳೆದ 4 ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ಇಂದು ಮಧ್ಯಾಹ್ನದಿಂದಲೇ ಸೈಕ್ಲೋನ್ ಎಫೆಕ್ಟ್ ರಾಜ್ಯದಲ್ಲಿ ಕಾಣಿಸಲಿದೆ. ಹವಾಮಾನ ಇಲಾಖೆಯ ಪ್ರಕಾರ ಆಂಧ್ರ ಪ್ರದೇಶದ ದಕ್ಷಿಣ ಭಾಗ ಮತ್ತು ಒಡಿಶಾದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಗಳಿವೆ. ಚಂಡಮಾರುತದ ವೇಗ ಹೆಚ್ಚಾಗಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಕೊಡಗು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸಂಭಾವ್ಯ ಚಂಡಮಾರುತಕ್ಕೆ ಅಸಾನಿ ಎಂದು ಹೆಸರಿಡಲಾಗಿದೆ. ಶ್ರೀಲಂಕಾ ಚಂಡಮಾರುತಕ್ಕೆ ಹೆಸರಿಟ್ಟಿದ್ದು, ಸಿಂಹಳಿ ಭಾಷೆಯಲ್ಲಿ ಅಸಾನಿ ಎಂದ್ರೆ ಕೋಧ ಎಂದರ್ಥ. ಆರಂಭದಲ್ಲಿ ಅಸಾನಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ಆಸಾನಿಯ ಅಬ್ಬರ ಸ್ವಲ್ಪ ತಗ್ಗಿದೆ. ಮಾರುತಗಳು ಓಡಿಶಾದತ್ತ ಚಲಿಸುತ್ತಿದ್ದು, ಮೇ 9 ಮತ್ತು ಮೇ 10 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಗಾಳಿಯ ವೇಳೆ ಗಂಟೆಗೆ 80 ರಿಂದ 90 ಕಿಲೋ ಮೀಟರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಮೇ 10ರ ನಂತರ ಗಾಳಿಯ ವೇಗ ಕಡಿಮೆಯಾಗಲಿದೆ. ಮೇ 9 ಮತ್ತು ಮೇ 10 ರಂದು ಆಂಧ್ರ ಮತ್ತು ಓಡಿಶಾದ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಓಡಿಶಾದ 17 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನೂ ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದೆ. ಗುಡುಗು-ಸಿಡಿಲು ಸಹಿತ ಮಳೆಯಾಗುತ್ತಿದ್ದು, ಪ್ರಾಣ ಹಾನಿ ಸಂಭವಿಸುತ್ತಿವೆ. ಮಧ್ಯಾಹ್ನದ ನಂತರ ಶುರುವಾಗುವ ಮಳೆ ಜನರನ್ನು ಹೈರಾಣಾಗಿಸಿದೆ. ಬಿಸಿಲಿಗೆ ಉತ್ತರ ಭಾರತ ತತ್ತರಿಸುತ್ತಿದ್ದರೆ, ಇತ್ತ ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ಕೂಡ ಸಿಲಿಕಾನ್ ಸಿಟಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರೆದಿದೆ.