ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಕೆಜಿಎಫ್ ನಲ್ಲಿ ಹೂಡಿಕೆ….
ಬೆಂಗಳೂರು, ಮೇ 03: ಪಿಎಸ್ಐ ಅಕ್ರಮ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ವಿವಾದ ಮೈಮೇಲೆ ಎಳೆದುಕೊಂಡಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಉನ್ನತ ಶಿಕ್ಷಣ, ಐಟಿ & ಬಿಟಿ ಸಚಿವ ಅಶ್ವತ್ಥ್ ನಾರಾಯಣ್ ಕೆಜಿಎಫ್ ಸಿನಿಮಾಗೆ ನಿರ್ಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ಬೇನಾಮಿ ಹಣವನ್ನು ಕಾನೂನು ಬದ್ಧಗೊಳಿಸಲು ಸಚಿವರು ಕೆಜಿಎಫ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ. ಎಸ್. ಉಗ್ರಪ್ಪ ಆರೋಪಿಸಿದ್ದಾರೆ.

ಈ ಕುರಿತು ಅಶ್ವತ್ಥ ನಾರಾಯಣಗೆ ಸವಾಲು ಹಾಕಿರುವ ವಿ. ಎಸ್. ಉಗ್ರಪ್ಪ, “ಅಶ್ವತ್ಥ ನಾರಾಯಣ ಭ್ರಷ್ಟಾಚಾರದ ಬಗ್ಗೆ ನೇರವಾಗಿ ಚರ್ಚೆ ನಡೆಸಲು ನಾನು ಸಿದ್ದನಿದ್ದೇನೆ, ನಮ್ಮ ಪಕ್ಷ ಸಿದ್ಧವಿದೆ. ವಿಧಾನಸೌಧದ ಪೂರ್ವ ಬಾಗಿಲು ಮೆಟ್ಟಿಲು ಮೇಲೆ ಚರ್ಚೆ ಮಾಡೋಕೆ ಸಿದ್ಧ ಇದ್ದೀನಿ. ಅಶ್ವತ್ಥ ನಾರಾಯಣ ಈ ಸವಾಲು ಸ್ವೀಕರಿಸಿ ಸಾರ್ವಜನಿಕ ಮುಕ್ತ ಚರ್ಚೆಗೆ ಬರಲಿ” ಎಂದು ಪಂಥಾಹ್ವಾನ ನೀಡಿದ್ದಾರೆ. “ನಮ್ಮ ಪಾರ್ಟಿ ಎಷ್ಟು ಭ್ರಷ್ಟಾಚಾರ ಮಾಡಿದೆ?. ಬಿಜೆಪಿ ಎಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ? ಎಂಬುದಕ್ಕೆ ಚರ್ಚೆ ನಡೆಸಲು ನಾನು ಸಿದ್ಧನಿದ್ದೀನಿ. ಯಾವ ದಿನ?, ಯಾವ ಸಮಯ?, ಯಾವ ಸ್ಥಳದ ಬಗ್ಗೆ ಅಶ್ವತ್ಥ್ ನಾರಾಯಣ್ ಅವರೇ ತಿಳಿಸಲಿ. ನಾನು ಚಾಲೆಂಜ್ ಮಾಡುತ್ತಿದ್ದೇನೆ. ಅವರ ಮತ್ತು ಅವರ ಪಕ್ಷದ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದರು.
“ಯಾರು ಎಷ್ಟು ಲೂಟಿ ಮಾಡಿದ್ದಾರೆ ಎಂಬುದು ಚರ್ಚೆ ಮಾಡೋಣ. ನಮ್ಮ ಪಕ್ಷ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದೆ. ಬಿಜೆಪಿ ಪಕ್ಷ ಲೂಟಿ ಮಾಡುತ್ತಿದೆ. ಅಶ್ವತ್ಥ ನಾರಾಯಣ ಕೆಜಿಎಫ್ ಸಿನಿಮಾ ನಿರ್ಮಾಪಕರು ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ಸಾವಿರ ಕೋಟಿ ಗಳಿಕೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಿನಿಮಾ ಒಂದು ಸಾವಿರ ಕೋಟಿ ಗಳಿಕೆ ಮಾಡಿತೋ ಅಥವಾ ಬೇನಾಮಿ ಹಣವನ್ನು ಕಾನೂನು ಬದ್ಧಗೊಳಿಸಲು ನಿರ್ಮಾಪಕರಾದರೋ ಈ ಬಗ್ಗೆ ತನಿಖೆಯಾಗಬೇಕು” ಎಂದು ಆಗ್ರಹಿಸಿದರು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಚಿವ ಅಶ್ವತ್ಥ ನಾರಾಯಣ ಸಹೋದರ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಮಾಗಡಿ ಮೂಲದ ಮೂವರು ಅಭ್ಯರ್ಥಿಗಳು ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆ. ಅಶ್ವತ್ಥ ನಾರಾಯಣ ಸಹೋದರ ಅವರೇ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಚಿವರ ಅಧಿಕಾರ ದುರ್ಬಳಕೆಯಾಗಿದೆ. ಕೂಡಲೇ ಅಶ್ವತ್ಥ ನಾರಾಯಣ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಅಗ್ರಹಿಸಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿದ್ದ ಅಶ್ವತ್ಥ್ ನಾರಾಯಣ ನನ್ನ ಏಳಿಗೆ ಸಹಿಸದ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಕುಟುಂಬ ಡಿ. ಕೆ. ಶಿವಕುಮಾರ್ ಕುಟುಂಬದಂತಹ ಹಿನ್ನೆಲೆ ಹೊಂದಿಲ್ಲ ಎಂದು ಟಾಂಗ್ ನೀಡಿದ್ದರು. ಇದೀಗ ವಿವಾದ ಮತ್ತಷ್ಟು ತಾರಕಕ್ಕೇರಿದ್ದು, ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ.