ದೇಶ

ಎಥೆನಾಲ್ ಉತ್ಪಾದನೆಗೆ ಕೇಂದ್ರದ ನೆರವು ಕೋರಿದ ಮುನೇನಕೊಪ್ಪ..

ದೆಹಲಿ: ಕಬ್ಬು ಬೆಳೆಗಾರರಿಗೆ ನೆರವಾಗಲೆಂದು ಕರ್ನಾಟಕ ಸರ್ಕಾರವು ಎಥೆನಾಲ್ ಉತ್ಪಾದನೆ ಹೆಚ್ಚಿಸಲು ಮುಂದಾಗಿದೆ. ಎಥೆನಾಲ್ ಉತ್ಪಾದನೆಗೆ ನೆರವು ನೀಡುವಂತೆ ಕೇಂದ್ರ ವಾಣಿಜ್ಯ ಮತ್ತು ಆಹಾರ ಇಲಾಖೆ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಕರ್ನಾಟಕದ ಸಕ್ಕರೆ ಖಾತೆ ಸಚಿವ ಶಂಕರ್ ಮುನೇನಕೊಪ್ಪ ಮನವಿ ಸಲ್ಲಿಸಿದರು. ಕಬ್ಬು ಬೆಳೆಯುವಲ್ಲಿ ಕರ್ನಾಟಕವು ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ. ಕಬ್ವು ಬೆಳೆಗಾರರು ಹಾಗೂ ಕಾರ್ಖಾನೆಗಳು ನಷ್ಟದಲ್ಲಿವೆ. ಅವರಿಗೆ ಲಾಭ ಮಾಡಿಕೊಡಲು ಹೊಸ ಎಥೆನಾಲ್ ನೀತಿ ಅಳವಡಿಸಿಕೊಂಡಿದ್ದೇವೆ. ಮೂರು ಬೆಳೆಗಳಿಂದ (ಕಬ್ಬು, ಗೋವಿನ‌ಜೋಳ, ಭತ್ತ) ಎಥನಾಲ್ ಉತ್ಪಾದನೆಗೆ ಈಗಾಗಲೇ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಹೊಸ ನೀತಿಯ ಪ್ರಕಾರ ಎಥನಾಲ್ ಉತ್ಪಾದನೆಯಾದರೆ ಎಲ್ಲರಿಗೂ ಲಾಭವಾಗುತ್ತದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕೇಂದ್ರದ ಎಥನಾಲ್ ನೀತಿಗಳ ಮಾದರಿಯಲ್ಲಿ ರಾಜ್ಯದಲ್ಲೂ ಎಥನಾಲ್ ಉತ್ಪಾದನೆ ಆರಂಭಿಸಿ, ನಷ್ಟ ತುಂಬಿಕೊಳ್ಳಬಹುದು. ಈ‌ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಗಿ, ಎಥನಾಲ್ ಉತ್ಪಾದನೆಗೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದೆ. ಕೇಂದ್ರ ಸರ್ಕಾರವು ಪೆಟ್ರೋಲ್​ಗೆ ಶೇ 10ರಷ್ಟು ಎಥನಾಲ್ ಬೆರೆಸಬೇಕು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಎಥೆನಾಲ್ ಬಳಕೆಗೆ ಸಾಕಷ್ಟು ಅವಕಾಶಗಳಿವೆ. ನಾನು ಸಚಿವನಾದ ಮೇಲೆ ಕಬ್ಬು ಬೆಳೆಗಾರರಿಗೆ ಎಲ್ಲಾ ಬಾಕಿಯನ್ನು ಚುಕ್ತ ಮಾಡಲಾಗಿದೆ ಎಂದು ತಿಳಿಸಿದರು.

ಎಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ
ಕರ್ನಾಟಕದ ಉಡುಪಿಯಲ್ಲಿ ಈಚೆಗೆ ನೇಕಾರರ ಪ್ರಾಥಮಿಕ ಸಹಕಾರ ಸಂಘಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ್ದ ಮುನೇನಕೊಪ್ಪ, ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್‌ ಅನ್ನು ಸರ್ಕಾರವೇ ಖರೀದಿಸಿ ಪೆಟ್ರೋಲಿಯಂ ಕಂಪನಿಗಳಿಗೆ ಮಾರಾಟ ಮಾಡಲಿದೆ. ಎಥೆನಾಲ್ ಉತ್ಪಾದಿಸಲು ಅನುಮತಿ ಕೋರುವ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ನೀಡಲಾಗುವುದು. ಸಕ್ಕರೆ ಕಾರ್ಖಾನೆಗಳು ಸಕ್ಕರೆಯೊಂದಿಗೆ ಉಪ ಉತ್ಪನ್ನಗಳನ್ನು ತಯಾರಿಸಿ, ಆರ್ಥಿಕವಾಗಿ ಸದೃಢವಾಗಬೇಕು ಎಂದು ಹೇಳಿದ್ದರು.

ಪೆಟ್ರೋಲ್‌-ಡಿಸೇಲ್​ನಲ್ಲಿ ಶೇ 35ರಷ್ಟು ಎಥೆನಾಲ್‌ ಬೆರೆಸುವುದರಿಂದ ಕಚ್ಚಾತೈಲದ ಆಮದು ಕಡಿಮೆಯಾಗಲಿದೆ. ದೇಶೀಯ ಬಳಕೆಯ ನಂತರ ಉಳಿಯುವ ಹೆಚ್ಚುವರಿ ಎಥೆನಾಲ್‌ ಅನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ ಜಿಎಸ್‌ಟಿಯಿಂದ ಲಾಭವಾಗಲಿದೆ ಎಂದು ವಿವರಿಸಿದ್ದರು.

ಎಥೆನಾಲ್ ಉತ್ಪಾದನೆಗೆ ಕಾರ್ಖಾನೆಗಳ ಚಿಂತನೆ
ಸಕ್ಕರೆ ಕಾರ್ಖಾನೆಗಳು ಸಕ್ಕರೆಯನ್ನಷ್ಟೇ ಉತ್ಪಾದಿಸುವುದರಿಂದ ಹೆಚ್ಚು ಲಾಭ ಬರುವುದಿಲ್ಲ. ಸಕ್ಕರೆ ಉತ್ಪಾದಿಸಿದ ಬಳಿಕ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೆ ಅದನ್ನು ಶೇಖರಿಸಿಡಬೇಕು. ಹೀಗೆ ದಾಸ್ತಾನಾಗಿದ್ದ ಸಕ್ಕರೆ ವಾತಾವರಣ ಪ್ರಕೋಪದಿಂದ ಹಾಳಾದರೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ. ಕಬ್ಬು ಬೆಳೆಗಾರರಿಗೆ ಬಾಕಿಹಣ ನೀಡಲೂ ಇದರಿಂದ ಸಮಸ್ಯೆಯಾಗುತ್ತದೆ. ಇದರ ಬದಲಿಗೆ ಎಥೆನಾಲ್‌ ಉತ್ಪಾದಿಸಿದರೆ ಸಕ್ಕರೆ ಕಾರ್ಖಾನೆಗಳ ಆದಾಯ ಸಾಧ್ಯತೆ ಹೆಚ್ಚಾಗುತ್ತದೆ.

ಪೆಟ್ರೋಲ್‌ನಲ್ಲಿ ಹಂತಹಂತವಾಗಿ ಎಥೆನಾಲ್ ಬಳಕೆ ಹೆಚ್ಚಿಸಲು ಕೇಂದ್ರ ಸರ್ಕಾರವು ಸಲಹೆ ಮಾಡಿದೆ 2022ರಲ್ಲಿ ಶೇ 10 ಹಾಗೂ 2025ರಲ್ಲಿ ಶೇ 20ರಷ್ಟು ಎಥೆನಾಲ್‌ ಮಿಶ್ರಣಕ್ಕೆ ಅವಕಾಶ ನೀಡಲಾಗುವುದು. ಪರ್ಯಾಯ ಇಂಧನವಾಗಿ ಎಥೆನಾಲ್ ಬಳಕೆಯಾಗುವುದರಿಂದ ಸಕ್ಕರೆ ಕಾರ್ಖಾನೆಗಳಿಗೆ ನಷ್ಟವಾಗುವುದಿಲ್ಲ ಎನ್ನುವ ಕಾರಣದಿಂದಾಗಿ ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸಲು ಆಲೋಚಿಸುತ್ತಿವೆ.

Related Articles

Leave a Reply

Your email address will not be published. Required fields are marked *

Back to top button